ADVERTISEMENT

ಭದ್ರಾವತಿ | ತರಳಬಾಳು ಹುಣ್ಣಿಮೆ: ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಸಿಂಹಾಸನಾರೋಹಣ

-

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:07 IST
Last Updated 2 ಫೆಬ್ರುವರಿ 2026, 3:07 IST
ಭದ್ರಾವತಿಯಲ್ಲಿ ಭಾನುವಾರ ನಡೆದ ತರಳಬಾಳು ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವದ ನೋಟ
ಭದ್ರಾವತಿಯಲ್ಲಿ ಭಾನುವಾರ ನಡೆದ ತರಳಬಾಳು ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವದ ನೋಟ   

ಭದ್ರಾವತಿ: ನಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಭಾನುವಾರ ನಡೆಯಿತು. ಈ ವೇಳೆ ಸಿರಿಗೆರೆ ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿಂಹಾಸನಾರೋಹಣ ಮಾಡಿ ಆಶೀರ್ವವಚನ ನೀಡಿದರು.

ಇದೇ ಸಂದರ್ಭದಲ್ಲಿ ತರಳಬಾಳು ಜಗದ್ಗುರು ಬೃಹನ್ಮಠದಿಂದ ಹುತಾತ್ಮ ಸೈನಿಕರ 10 ಕುಟುಂಬಗಳಿಗೆ ತಲಾ ₹1 ಲಕ್ಷ ಆರ್ಥಿಕ ನೆರವು ನೀಡಲಾಯಿತು.

ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ..:  ಸಮಾರೋಪಕ್ಕೂ ಮುನ್ನ ಮಧ್ಯಾಹ್ನ ನಗರದಲ್ಲಿ ತೆರೆದ ವಾಹನದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಬೆಳ್ಳಿ ಪಲ್ಲಕ್ಕಿ ಉತ್ಸ ವಿಜೃಂಭಣೆಯಿಂದ ಜರುಗಿತು.

ADVERTISEMENT

ಅಡ್ಡಪಲ್ಲಕ್ಕಿ ಉತ್ಸವ ಚನ್ನಗಿರಿ ರಸ್ತೆಯ ಎ.ಪಿ.ಎಂ.ಸಿ ಮುಂಭಾಗದಿಂದ ಆರಂಭವಾಗಿ ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ, ಡಾ.ರಾಜಕುಮಾರ್ ರಸ್ತೆ ಮೂಲಕ ಹಾಲಪ್ಪ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೆ.ಎಸ್.ಆರ್.ಟಿ.ಸಿ ಮುಖ್ಯ ಬಸ್ ನಿಲ್ದಾಣ, ರಿಲಯನ್ಸ್ ಪೆಟ್ರೋಲ್ ಬಂಕ್ ಮೂಲಕ ಹುತ್ತಾ ಕಾಲೊನಿವರೆಗೆ ಸಾಗಿತು.

ಶ್ರೀಮಠದ ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಶ್ರಿಮಠದ ವಿದ್ಯಾರ್ಥಿಗಳು ಶಿವಧ್ವಜ ಹಿಡಿದು, ಮಹಿಳೆಯರು ಬಣ್ಣದ ಸೀರೆಯನ್ನುಟ್ಟು ಕುಂಭಮೇಳ ಹೊತ್ತು ಡೊಳ್ಳುಕುಣಿತದ ಜೊತೆಗೆ ಸಾಗಿದರು.

ಮೆರವಣಿಗೆಯಲ್ಲಿ ವೀರಗಾಸೆ, ಆಂಜನೇಯ ಗೊಂಬೆ, ಶಿವ ಗೊಂಬೆ, ನವಿಲು ಕುಣಿತ, ಗಾರುಡಿ ಗೊಂಬೆ, ನರಸಿಂಹ ಸ್ವಾಮಿ, ತಮಟೆ, ಜೋಕರ್, ಕೀಲು ಕುದುರೆ, ಕೋಳಿ ಹುಂಜ, ನಾಸಿಕ್ ಡೋಲು, ನಗಾರಿ ಬಡಿತ, ಮಹಿಷಾಸುರ, ರಾಣಿ, ಜಗ್ಗಲಿಗೆ, ಕಹಳೆ ಮತ್ತು ಛತ್ರಿ ಚಂಡೆವಾದ್ಯ, ಮಹಿಳಾ ತಮಟೆ, ಪೂಜಾ ಕುಣಿತ, ಮಹಿಳಾ ಡೊಳ್ಳು ತ್ರಾಶ್ವಾದ್ಯ, ಗೊರವರ ಕುಣಿತ, ತ್ರಾಶ್, ನಂದಿಧ್ವಜ ಕುಣಿತ ಸೇರಿದಂತೆ 20ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಮೆರವಣಿಗೆ ವೇಳೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸಂಚಾರಕ್ಕೆ ಕೆಲಕಾಲ ತೊಂದರೆಯಾಗಿತ್ತು. ಪೊಲೀಸರು ಸಕಾಲಿಕ ಕ್ರಮ ಕೈಗೊಂಡು ವಾಹನ ಸಂಚಾರ ಸುಗಮಗೊಳಿಸಿದರು. ಶ್ರೀಗಳೊಂದಿಗೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಹಾಗೂ ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಕೂಡ ಮೆರವಣಿಗೆಯಲ್ಲಿ ಸಾಗಿ ಬಂದರು.

ಗಣ್ಯರು ಏನೆಂದರು..

ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರೆಯಬೇಕು ಎಂಬುದು ಬಸವಣ್ಣನವರ ಆಶಯ. ಈ ದೇಶ ಎಲ್ಲರಿಗೂ ಸೇರಿದ್ದು, ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ನಮ್ಮ ಶಕ್ತಿಯಾಗಿದೆ. ಮನುಷ್ಯನ ಭಾವನೆ ಬಹಳ ಮುಖ್ಯ. ನಮ್ಮ ಜಾತಿ ನಮ್ಮ ಮನೆಯ ಒಳಗಡೆ ಇರಬೇಕು, ಹೊರಗಡೆ ಮನುಷ್ಯತ್ವ ಕಾಣಬೇಕು. 
ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಸಿರಿಗೆರೆ ಮಠವು ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸುತ್ತಿದ್ದು, ಬದುಕಿನ ಸತ್ಯ ದರ್ಶನವಾಗಬೇಕೆಂದರೆ ತರಳಬಾಳು ಹುಣ್ಣಿಮೆಗೆ ಬರಬೇಕಾಗಿದೆ. ಗುರುಪರಂಪರೆಯನ್ನು ಆಚರಿಸುವುದು ಈ ಮಠದ ವಿಶೇಷ.
ಬಸವರಾಜ ಬೊಮ್ಮಾಯಿ, ಹಾವೇರಿ ಸಂಸದ
ಧಾರ್ಮಿಕ ಪೀಠಗಳು ಸಂಘರ್ಷದ ದಾರಿಯಲ್ಲದೇ ಸಂವಾದ ಹಾಗೂ ಸಮಾಧಾನದ ದಿಕ್ಕಿನಲ್ಲಿ ಸಮಾಜವನ್ನು ಮುನ್ನಡೆಸುತ್ತಿವೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಸಮಾಜಕ್ಕೆ ತೋರಿಸಿ ಕೊಟ್ಟಿರುವ ತರಳಬಾಳು ಶ್ರೀಗಳು. ಉಬ್ರಾಣಿ, ಭರಮಸಾಗರ, ಜಗಳೂರು ಏತ ನೀರಾವರಿ ಯೋಜನೆಗಳಿಗೆ ಕಾರಣಕರ್ತರು.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಗ್ರಾಮಾಂತರ ಪ್ರದೇಶದ ಜನರ ಶಿಕ್ಷಣ ಮಟ್ಟವನ್ನು ಎತ್ತರಿಸುವಲ್ಲಿ ಸಿರಿಗೆರೆ ಮಠ ಮಹತ್ತರ ಪಾತ್ರ ವಹಿಸಿದೆ. ಸಮಾಜದಲ್ಲಿ ಜ್ಞಾನ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರೀಗಳ ಕೊಡುಗೆ ಅನನ್ಯ
ಯು.ಬಿ.ಬಣಕಾರ, ಹಿರೇಕೆರೂರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.