
ಆನವಟ್ಟಿ: ಗುಡಿ–ಗೋಪುರ ನಿರ್ಮಾಣಕ್ಕೆ ದಾನಿಗಳು ಉದಾರ ದೇಣಿಗೆ ನೀಡುತ್ತಾರೆ. ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಾಯ ಮಾಡುವವರು ವಿರಳ. ಆದರೆ, ಸಮೀಪದ ತತ್ತೂರು ವಡ್ಡಿಗೆರೆಯ ಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ, ಶಿಕ್ಷಣ ಪ್ರೇಮಿಗಳಾಗಿದ್ದು ದಾನ ರೂಪದಲ್ಲಿ ಹಣ ಅಥವಾ ವಸ್ತುಗಳನ್ನು ನೀಡುವ ಮೂಲಕ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.
1949ರಲ್ಲಿ 4 ಎಕರೆ ವಿಶಾಲ ಜಾಗದಲ್ಲಿ ಶಾಲೆ ಆರಂಭವಾಗಿದೆ. 7 ಕೊಠಡಿ, ಮನರೇಗಾ ಯೋಜನೆಯಲ್ಲಿ ನಿರ್ಮಾಣವಾದ ಒಂದು ಹೈಟೆಕ್ ಶೌಚಾಲಯ, ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು, ರಂಗಮಂದಿರ, ಆಟದ ಮೈದಾನ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಶಾಲೆ ಹೊಂದಿದೆ.
ಫಸಲು ಬರುತ್ತಿರುವ 20 ತೆಂಗಿನ ಮರ, 100 ಅಡಿಕೆ ಗಿಡ, ಹೊಸದಾಗಿ ನೆಟ್ಟಿರುವ 300 ಅಡಿಕೆ ಗಿಡ, 60 ತೆಂಗಿನ ಗಿಡ, ವಿವಿಧ ಪ್ರಭೇದದ ಗಿಡ- ಮರಗಳು, ಹತ್ತಾರು ಬಗೆಯ ಹೂವಿನ ಗಿಡಗಳು ಹಾಗೂ ವಿವಿಧ ಚಂದದಲಂಕಾರಿಕ ಗಿಡಗಳಿಂದ ಶಾಲೆಯ ಆವರಣದ ಕೈತೋಟ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ.
ಶಾಲೆಯ ಗೋಡೆಗಳ ಮೇಲೆ ವಿಶ್ವವಿಖ್ಯಾತ ಜೋಗ ಜಲಪಾತ, ಭಾರತಾಂಬೆಯ ಭಾವಚಿತ್ರ, ಕಲಿಕೆಗೆ ಪೂರಕವಾದ ವಿವಿಧ ಪ್ರಾಣಿ- ಪಕ್ಷಿ, ಹಸೆ ಚಿತ್ತಾರಗಳು ವಿದ್ಯಾರ್ಥಿಗಳ ಮನಸ್ಸಿಗೆ ಮುದ ನೀಡುತ್ತಿವೆ. ಕನ್ನಡ ಇತಿಹಾಸದ ಮೊದಲುಗಳನ್ನು ಸೊಪ್ಪು ಬೆಳೆಯುವ ಬಾನಿಗಳಿಗೆ ಬರೆಸಲಾಗಿದೆ. ಶಾಲೆಯ ಸುತ್ತ ಗಾದೆಗಳನ್ನು ಬರೆಸಿ ವಿವರಿಸಲಾಗಿದೆ ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗಲಿದೆ.
ಮಾದರಿ ಮುಖ್ಯ ಶಿಕ್ಷಕ:
ಶಾಲೆಯ ಅಡಿಕೆ ತೋಟ ಹಾಗೂ ಕೈತೋಟಕ್ಕೆ ನೀರು ಒದಗಿಸಲು ಪೈಪ್‌ಲೈನ್, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ರಕ್ಷಾ ಕವಚ, ನೆಲ ಹಾಸು, ಗ್ರೀನ್ ಬೋರ್ಡ್ ಸೇರಿದಂತೆ ವಿವಿಧ ಸವಲತ್ತುಗಳನ್ನು ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾದ ಮುಖ್ಯ ಶಿಕ್ಷಕ ಕೆ. ಬಸವರಾಜಪ್ಪ ಅವರು ತಾವು ಸೇವೆಗೆ ಹಾಜರಾಗಿ ಮೂರೂವರೆ ವರ್ಷದಲ್ಲಿ ವೈಯಕ್ತಿಕವಾಗಿ ಅಂದಾಜು ₹ 6.50 ಲಕ್ಷ ಒದಗಿಸಿ ಗ್ರಾಮಸ್ಥರಿಂದ ‘ಮಾದರಿ ಮುಖ್ಯ ಶಿಕ್ಷಕ’ ಎಂದು ಕರೆಸಿಕೊಂಡಿದ್ದಾರೆ.
‘ನಾನು ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಊರಿನ ಆರ್ಥಿಕ ಅಭಿವೃದ್ಧಿಯು ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಹಾಗೂ ಸೂಕ್ತ ವಾತಾವರಣ ಸೃಷ್ಟಿಸಲು ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಸಹ ಶಿಕ್ಷಕರು, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯವರು ಸಹಕರಿಸಿದ್ದಾರೆ’ ಎಂದು ಮುಖ್ಯ ಶಿಕ್ಷಕ ಕೆ. ಬಸವರಾಜಪ್ಪ ತಿಳಿಸಿದರು.
‘ಅಡಿಕೆ ಗಿಡ, ತೆಂಗಿನ ಮರಗಳಿಂದ ಬರುವ ಆದಾಯದಿಂದ ಶಾಲೆಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಅಲ್ಲದೆ, ಕೃಷಿ, ತೋಟಗಾರಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲೂ ಇದರಿಂದ ಅನುಕೂಲ ಎಂಬ ಕಾರಣದಿಂದ ತೋಟ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.
ಅಮೃತ ಮಹೋತ್ಸವಕ್ಕೆ ಸಹಕರಿಸಿ:
‘ಶಾಲೆಗೆ 75 ವರ್ಷಗಳು ತುಂಬಿ ಎರಡು ವರ್ಷ ಕಳೆದಿದೆ. ಈ ವರ್ಷ ಗ್ರಾಮಸ್ಥರು, ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ಮುಂದೆ ಬಂದರೆ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಉದ್ದೇಶವಿದೆ’ ಎಂದು ಹೇಳುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಆರ್. ನಿರ್ಮಲೇಸ್.
ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಯ ಪರಿಸರವನ್ನು ಹಸಿರುಗೊಳಿಸಲು ಸಹಕರಿಸಿದ್ದಾರೆ. ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಶಾಲೆಯ ಅಭಿವೃದ್ಧಿ ಸಹಕಾರ ನೀಡಿದ್ದಾರೆಆರ್.ನಿರ್ಮಲೇಸ್ ಎಸ್‌ಡಿಎಂಸಿ ಅಧ್ಯಕ್ಷ
ಕೊಳವೆಬಾವಿ ಕೊರೆಸಲು ಮನವಿ
ಈಗಿನ ಶೈಕ್ಷಣಿಕ ಬೇಡಿಕೆ ಅನುಗುಣವಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಕಾಳಜಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ಹಾಗೂ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಶಿಕ್ಷಣ ಪದ್ಧತಿ ಆರಂಭವಾಗುತ್ತಿದೆ. ಹಾಗಾಗಿ 4 ಕೊಠಡಿ ಹಾಗೂ ಅಡುಗೆ ಕೊಠಡಿ ಅಗತ್ಯವಿದೆ. ಆಟದ ಮೈದಾನ ಅಭಿವೃದ್ಧಿ ಜೊತೆಗೆ ಇನ್ನಷ್ಟು ಅಡಿಕೆ ಸಸಿಗಳನ್ನು ಬೆಳೆಸಲು ಜಾಗವಿದ್ದು ಕೊಳವೆ ಬಾವಿ ಕೊರೆಯಿಸುವಂತೆ ಪೋಷಕರು ಎಸ್‌ಡಿಎಂಸಿ ಸದಸ್ಯರು ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.