ADVERTISEMENT

ಶಿವಮೊಗ್ಗ | ಚಹಾದ ಸ್ವಾದ; ಹಿಂದೆ ಉಂಟು ನೂರೆಂಟು ಕೌತುಕ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 5:57 IST
Last Updated 9 ನವೆಂಬರ್ 2025, 5:57 IST
ಭಾರತೀಯ ಚಹಾ ಮಂಡಳಿಯ ಅಭಿವೃದ್ಧಿ ಅಧಿಕಾರಿ ವರುಣ್ ಮೆನನ್ ಶನಿವಾರ ಶಿವಮೊಗ್ಗದ ಕೃಷಿ ಮೇಳದಲ್ಲಿ ಕಲಬೆರಕೆ ಚಹಾ ಪುಡಿಯನ್ನು ಪತ್ತೆ ಮಾಡುವುದು ಹೇಗೆ ಎಂಬ ಪ್ರಾತ್ಯಕ್ಷಿಕೆಯನ್ನು ಗ್ರಾಹಕರಿಗೆ ತಿಳಿಸಿದರು
ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಭಾರತೀಯ ಚಹಾ ಮಂಡಳಿಯ ಅಭಿವೃದ್ಧಿ ಅಧಿಕಾರಿ ವರುಣ್ ಮೆನನ್ ಶನಿವಾರ ಶಿವಮೊಗ್ಗದ ಕೃಷಿ ಮೇಳದಲ್ಲಿ ಕಲಬೆರಕೆ ಚಹಾ ಪುಡಿಯನ್ನು ಪತ್ತೆ ಮಾಡುವುದು ಹೇಗೆ ಎಂಬ ಪ್ರಾತ್ಯಕ್ಷಿಕೆಯನ್ನು ಗ್ರಾಹಕರಿಗೆ ತಿಳಿಸಿದರು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಮುಂಜಾನೆ, ಸಂಜೆಯೋ, ಮತ್ತೆ ಯಾವಾಗಲೋ ಹೀಗೆ ನಿತ್ಯ ನಾವು ಕುಡಿಯುವ ಚಹಾ ಎಷ್ಟು ಸುರಕ್ಷಿತ? ಬಣ್ಣ ಕೆಂಪು ಆದರೆ ಮಾತ್ರವೇ ಅದು ಖಡಕ್ ಚಹಾವೇ? ಬ್ರಾಂಡ್–ಅನ್‌ಬ್ರಾಂಡ್‌ಗಳ ಗದ್ದಲದಲ್ಲಿ ಯಾವುದು ಕಲಬೆರಕೆ? ಯಾವುದು ನೈಜ?.. 

ಹೀಗೆ ಚಹಾ ಪ್ರಿಯರ ನೂರೆಂಟು ಪ್ರಶ್ನೆಗಳಿಗೆ ಭಾರತೀಯ ಚಹಾ ಮಂಡಳಿ (Tea Board of India) ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಉತ್ತರ ತಲುಪಿಸುತ್ತಿದೆ. 

ಭಾರತೀಯ ಚಹಾ ಮಂಡಳಿ ಇದೇ ಮೊದಲ ಬಾರಿಗೆ ಶಿವಮೊಗ್ಗದ ಕೃಷಿ ಮೇಳದಲ್ಲಿ ತನ್ನ ಮಳಿಗೆ ತೆರೆದಿದೆ. ಅಲ್ಲಿ ತಮಿಳುನಾಡಿನ ನೀಲಗಿರಿ ಹಾಗೂ ಕೇರಳದ ವಯನಾಡು ಜಿಲ್ಲೆಗಳ ರೈತರು ಬೆಳೆದ ಉತ್ಕೃಷ್ಟ ಗುಣಮಟ್ಟದ ಚಹಾ ಪುಡಿ ಹಾಗೂ ಚಹಾ ಎಲೆ ಹಾಗೂ ಹಸಿರು ಚಹಾ (ಗ್ರೀನ್ ಟೀ) ಮಾರಾಟಕ್ಕೆ ವೇದಿಕೆ ಕಲ್ಪಿಸಿದೆ.

ADVERTISEMENT

ಬ್ರಿಟಿಷರು ಪರಿಚಯಿಸಿದ್ದ ರೋಲಿಂಗ್ ಮಾದರಿಯಲ್ಲಿ ಚಹಾ ಗಿಡದ ಎಲೆ, ಮೊಗ್ಗನ್ನು 14ರಿಂದ 16 ತಾಸು ಸಂಸ್ಕರಿಸಿ ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಚಹಾ ಪುಡಿಯನ್ನು ಸಿದ್ಧಪಡಿಸಲಾಗುತ್ತದೆ. ಸಂಸ್ಕರಣೆಯ ಸುದೀರ್ಘ ಅವಧಿಯಲ್ಲಿ ಚಹಾದ ಎಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಸಾಂಪ್ರದಾಯಿಕ ಕಪ್ಪು ಚಹಾ ತಯಾರಿಕೆ ವಿಧಾನ. ಅದು ಸಾಮಾನ್ಯವಾಗಿ ಬಳಸುವ (ಸಿಟಿಸಿ) ಚಹಾ ಪುಡಿ.

ಏನಿದು ಹಸಿರು ಚಹಾ?: ಚಹಾ ಎಲೆಯನ್ನು ಕಿತ್ತ ನಂತರ ಬರೀ 1ರಿಂದ 2 ಗಂಟೆ ಹಬೆಯಲ್ಲಿ ಬೇಯಿಸಿ ನಂತರ ರೋಲ್ ಮಾಡಿ ಹಸಿರು ಚಹಾ ತಯಾರಿಸುತ್ತಾರೆ. ಮೊಗ್ಗನ್ನು ಇನ್ನೂ ಕಡಿಮೆ ಅವಧಿಯಲ್ಲಿ ಸಂಸ್ಕರಿಸುವುದರಿಂದ ಬಿಳಿ ಬಣ್ಣಕ್ಕೂ ತಿರುಗುತ್ತದೆ. ಉತ್ಕೃಷ್ಟ ಮಾದರಿಯ ಆ ಚಹಾದ ಎಲೆಯನ್ನು ನೇರವಾಗಿ ತಿನ್ನಬಹುದು. ಇಲ್ಲವೇ ಮೌತ್ ಫ್ರೆಶನರ್ ರೀತಿ ಬಳಕೆ ಮಾಡಬಹುದು.

ಚಹಾಗೆ ಎಷ್ಟು ಪ್ರಮಾಣದಲ್ಲಿ ಹಾಲು, ಸಕ್ಕರೆ ಬೆರೆಸಬೇಕು ಎಂಬುದಲ್ಲದೆ, ಸಂಸ್ಕರಣೆ ಅವಧಿ ಹಾಗೂ ವಿಧಾನ ಆಧರಿಸಿ ತಯಾರಿಸಲಾಗುವ   ಚಹಾಪುಡಿ, ಅದರ ಗುಣಮಟ್ಟವನ್ನು ಮಂಡಳಿಯ ಮಳಿಗೆಯಲ್ಲಿ ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ. 

ಚಹಾಪುಡಿ ಕಲಬೆರಕೆ ಪತ್ತೆ ಹೇಗೆ?

ಮನೆಗೆ ತಂದ ಚಹಾಪುಡಿಯಲ್ಲಿ ಒಂದು ಚಮಚದಷ್ಟು ಪುಡಿಯನ್ನು ಗಾಜಿನ ಲೋಟದಲ್ಲಿ ಶುದ್ಧ ನೀರು ತುಂಬಿಸಿ  ಹಾಕಿದರೆ ಅದು ನೇರವಾಗಿ ತಳಕ್ಕೆ ಹೋಗಿ ಕುಳಿತುಕೊಳ್ಳುತ್ತದೆ. ಈ ಅವಧಿಯಲ್ಲಿ ಚಹಾಪುಡಿ ಕೆಂಪು ಇಲ್ಲವೇ ಕಪ್ಪು ಬಣ್ಣ ಬಿಟ್ಟರೆ ಅದು ಕಲಬೆರಕೆ ಆಗಿದೆ ಎಂದೇ ಅರ್ಥ. ಯಾವುದೇ ಬಣ್ಣ ಬಿಡದೇ ಕಪ್ಪು ಬಣ್ಣದ ಚಹಾಪುಡಿ ತಳದಲ್ಲಿ ಕುಳಿತರೆ ಅದು ನೈಜ ಪುಡಿ’ ಎಂದು ಭಾರತೀಯ ಚಹಾ ಮಂಡಳಿಯ ಅಭಿವೃದ್ಧಿ ಅಧಿಕಾರಿ ವರುಣ್ ಮೆನನ್ ಹೇಳುತ್ತಾರೆ. ಅಪಾಯಕಾರಿ ಬಣ್ಣಗಳನ್ನು ಬಳಸಿ ತಯಾರಿಸಿದ ಆಹಾರ ಸೇವನೆಯಿಂದ ಬರುವ ಕ್ಯಾನ್ಸರ್‌ ಸೇರಿ ಬೇರೆಬೇರೆ ಆರೋಗ್ಯ ಸಂಬಂಧಿ ಕಾಯಿಲೆಗಳು ಚಹಾಪುಡಿ ಕಲಬೆರಕೆಯಿಂದಲೂ ಬರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಮಂಡಳಿ ಸಂಪರ್ಕ ಸೇತುವೆ ಮಾತ್ರ..

ಭಾರತೀಯ ಚಹಾ ಮಂಡಳಿ ಚಹಾದ ಯಾವುದೇ ಉತ್ಪನ್ನ ಹಾಗೂ ಬ್ರಾಂಡ್ ಹೊಂದಿಲ್ಲ. ಸಣ್ಣ ಬೆಳೆಗಾರರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಮಾತ್ರ ಅದು ಕೆಲಸ ಮಾಡುತ್ತದೆ ಎಂದು ಮಂಡಳಿಯ ವರುಣ್ ಮೆನನ್ ಮೇಳದಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು. ಸಾವಯವ ಚಹಾ ಲಭ್ಯ: ಸುಭಾಷ್‌ ಪಾಳೇಗಾರ್ ಅವರ ಒಡನಾಟದಿಂದ ಪ್ರಭಾವಿತರಾಗಿ ಶೂನ್ಯ ಕೃಷಿ ಮಾದರಿ ಅಳವಡಿಸಿಕೊಂಡು ಯಾವುದೇ ರಾಸಾಯನಿಕಗಳ ಬಳಕೆ ಮಾಡದೇ ಚಹಾ ಬೆಳೆಯುತ್ತಿರುವ ನೀಲಗಿರಿಯ ಪಿ.ಕೆ. ಕುಮಾರ್ ಬೆಳೆದ ಪಿ.ಕೆ.ಬ್ರಾಂಡ್ ಚಹಾ ಹಾಗೂ ವಯನಾಡು ಬೆಳೆಗಾರರ ಒಕ್ಕೂಟದ ಚಹಾ ಪುಡಿ ಹಾಗೂ ಎಲೆಗಳನ್ನು ಮಂಡಳಿಯ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು. ‘ಮೇಳದಲ್ಲಿ ದೊರೆತ ಗ್ರಾಹಕರ ಸ್ಪಂದನೆಯಿಂದ ಸಂತಸವಾಗಿದೆ’ ಎಂದು ಪಿ.ಕೆ.ಕುಮಾರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.