ಹೊಸನಗರ: ಹೆಚ್ಚುವರಿ ಹುದ್ದೆ ಎಂದು ಶಿಕ್ಷಕರನ್ನು ವರ್ಗಾವಣೆ ಮಾಡುತ್ತಿರುವುದನ್ನು ವಿರೋಧಿಸಿ ಮಂಗಳವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.
ಶಾಲೆಯ 9 ವಿಭಾಗಗಳಲ್ಲಿ 365 ವಿದ್ಯಾರ್ಥಿಗಳು ಓದುತ್ತಿದ್ದು, ಮೂರು ಮಾಧ್ಯಮಗಳನ್ನು ಹೊಂದಿದೆ. ಈವರೆಗೆ ಶಾಲೆಯಲ್ಲಿ 2 ಕಲಾ(ಕನ್ನಡ) ಮತ್ತು 1 ಕಲಾ(ಉರ್ದು) ಹುದ್ದೆಗಳಿದ್ದು, ಪ್ರಸ್ತುತ ವರ್ಗಾವಣೆ ನಿಯಮದ ಪ್ರಕಾರ, ಒಂದು ಕಲಾ(ಕನ್ನಡ) ಹುದ್ದೆಯನ್ನು ಹೆಚ್ಚುವರಿಯೆಂದು ಗುರುತಿಸಿ, ಕಲಾ(ಕನ್ನಡ) ಹುದ್ದೆಯ ಶಿಕ್ಷಕರನ್ನು ವರ್ಗಾವಣೆ ಮಾಡಲು ಸಿದ್ಧತೆ ಮಾಡಿರುತ್ತಾರೆ. ಕಲಾ(ಉರ್ದು) ಶಿಕ್ಷಕರಿಂದಲೇ ಆಂಗ್ಲ ಮಾಧ್ಯಮದ ಕಲಾ ವಿಷಯ ಬೋಧಿಸುವಂತೆ ತಿಳಿಸಲಾಗಿದೆ. ಇದರಿಂದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅಸಾಧ್ಯವಾಗಿದ್ದು, ಕೂಡಲೇ ವರ್ಗಾವಣೆಯನ್ನು ರದ್ದುಗೊಳಿಸಿ ಶಾಲೆಗೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಚೇರಿಯಲ್ಲಿ ಸಮಾವೇಶಗೊಂಡು ಮನವಿ ಸಲ್ಲಿಸಿದರು. ನಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವವರೆಗೆ ಶಾಲಾ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿ ಕುಮಾರ್ ಸಮಿತಿ ಸದಸ್ಯರು ಹಾಗೂ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.