ADVERTISEMENT

ಮುಚ್ಚವ ಹಂತದಲ್ಲಿದ್ದ ಶಾಲೆಗೆ ಕಾಯಕಲ್ಪ

ಸೊಪ್ಪುಗುಡ್ಡೆ ಸರ್ಕಾರಿ ಶಾಲೆ: ವಿಶೇಷ ಮಕ್ಕಳಿಗೆ ಮಾತೃಸ್ಪರ್ಶಿ ಆರೈಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:16 IST
Last Updated 14 ಸೆಪ್ಟೆಂಬರ್ 2025, 5:16 IST
ವಿಶೇಷ ಚೇತನ ಮಗುವಿಗೆ ತರಬೇತಿ ನೀಡುತ್ತಿರುವ ಶಿಕ್ಷಕ ಕುಮಾರ್ ಎಚ್.ಸಿ.
ವಿಶೇಷ ಚೇತನ ಮಗುವಿಗೆ ತರಬೇತಿ ನೀಡುತ್ತಿರುವ ಶಿಕ್ಷಕ ಕುಮಾರ್ ಎಚ್.ಸಿ.   

ತೀರ್ಥಹಳ್ಳಿ: ‘ಹಾಸಿಗೆ ಹಿಡಿದಿದ್ದ ನನ್ನ ಮಗಳು ನಡೆಯುತ್ತಾಳೆ. ಅವಳ ಮೈ ತೀರಾ ಮೃದುವಾಗಿತ್ತು. ಊಟ, ಶೌಚ ಎಲ್ಲವನ್ನೂ ನಾವೇ ಮಾಡಿಸಬೇಕಿತ್ತು. ಶಾಲೆಗೆ ಸೇರಿದ ನಂತರ ತನ್ನ ಕೆಲಸ ತಾನೆ ಮಾಡಿಕೊಳ್ಳುತ್ತಾಳೆ. ನಾನಂತೂ ಇಂತಹ ವಿಸ್ಮಯವನ್ನು ಬದುಕಿನಲ್ಲೇ ನೋಡುವುದಿಲ್ಲ ಎಂದುಕೊಂಡಿದ್ದೆ’...

ಇಲ್ಲಿನ ಸೊಪ್ಪುಗುಡ್ಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ತಮ್ಮ ಮಗಳ ಕಂಡು ಚಿಕ್ಕಮಗಳೂರು ಜಿಲ್ಲೆಯ ರಚನಾ ಹರ್ಷ ವ್ಯಕ್ತಪಡಿಸಿದ್ದು ಹೀಗೆ. ಇದು ಈ ಶಾಲೆಗೆ ಕಲಿಯಲು ಬರುವ ಬಹುತೇಕ ಎಲ್ಲಾ ಮಕ್ಕಳ ಪೋಷಕರ ಅಭಿಮತ.

‘ಮಗ ಸೂರ್ಯ 4ನೇ ತರಗತಿಯಲ್ಲಿ ಓದುವಾಗ ಬಲ ಕಾಲು, ಕೈಯಲ್ಲಿ ಸಮಸ್ಯೆ ಕಂಡು ಬಂತು. ಕುಳಿತುಕೊಳ್ಳಲೂ ಕಷ್ಟವಾಗುತ್ತಿತ್ತು. ದೇಶದ ನಾನಾ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಮುಂದಾದೆವು. ಆದರೆ ಎಲ್ಲಿಯೂ ಉತ್ತಮ ಫಲಿತಾಂಶ ಸಿಗಲಿಲ್ಲ. ಕೊನೆಯದಾಗಿ ಈ ಶಾಲೆಗೆ ಸೇರಿಸಿದೆ. ನಿತ್ಯ ಸಂಜೆ ಶಿಕ್ಷಕ ಕುಮಾರ್ ವ್ಯಾಯಾಮ ಮಾಡಿಸಿದರು. ನಿಧಾನವಾಗಿ ಆರೋಗ್ಯದಲ್ಲಿ ಚೇತರಿಕೆ ಉಂಟಾಯಿತು. ಪಿಯುಸಿ ತನಕವೂ ಹೀಗೆಯೇ ಇದೇ ಶಾಲೆಯಲ್ಲಿ ತರಬೇತಿ ಮುಂದುವರಿಯಿತು’ ಎಂದು ದಯಾನಂದ ತಗಡವಳ್ಳಿ ಹೇಳುತ್ತಾರೆ.

‘ಮಗನಿಗೆ ಈಗ 25 ವರ್ಷ. ಈಗ ಆತ ಕುಳಿತುಕೊಳ್ಳುತ್ತಾನೆ. ಅವನಿಗಾಗಿಯೇ ಮನೆಯಲ್ಲಿ ವ್ಯಾಯಾಮ ಕೊಠಡಿ ಮಾಡಿದ್ದೇವೆ. ಈಗ ರಾಜ್ಯಮಟ್ಟದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಮೂರು ಬಾರಿ ಬೆಳ್ಳಿಯ ಪದಕ ಪಡೆದಿದ್ದಾನೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಶ್ರೇಷ್ಠ ಸಾಧನೆ ಮಾಡಿ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಕನಸು ಹೊಂದಿದ್ದಾನೆ’ ಎಂದು ಮಗನ ಯಶೋಗಾಥೆ ಹಂಚಿಕೊಳ್ಳುತ್ತಾರೆ.

ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ವಯಸ್ಸು 25 ವರ್ಷ ಮೇಲ್ಪಟ್ಟಿದೆ. ಬೇರೆ ಶಾಲೆಗಳಲ್ಲಿ ದಾಖಲಾತಿ ಪಡೆದು ತರಬೇತಿಗಾಗಿ ಇಲ್ಲಿಗೆ ಬರುತ್ತಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಮೂಡುಬಿದರೆ, ಉಡುಪಿ, ಶೃಂಗೇರಿ, ಕಾರ್ಕಳ, ಶಿವಮೊಗ್ಗ, ತುಮಕೂರು, ಅಮೆರಿಕದ ವಿದ್ಯಾರ್ಥಿಗಳು ಸದ್ಯ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಶಿಕ್ಷಕ ಎಚ್‌.ಸಿ.ಕುಮಾರ 2007ರಲ್ಲಿ ಇಲ್ಲಿಗೆ ವರ್ಗವಾಗಿ ಬಂದಿದ್ದರು. ಸುತ್ತಮುತ್ತಲು ಉತ್ತಮ ಶಾಲೆಗಳು ಇದ್ದುದರಿಂದ ಈ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಮೈಸೂರಿನಲ್ಲಿ ವಿಶೇಷ ಡಿಪ್ಲೊಮಾ ಬಿ.ಇಡಿ ಪದವಿ ಪಡೆದಿದ್ದ ಅವರು ಅಂಗವಿಕಲ ಮಕ್ಕಳು ಶಾಲೆಗೆ ದಾಖಲಾಗುವಂತೆ ಪ್ರೋತ್ಸಾಹಿಸಿದರು. ಮಕ್ಕಳಲ್ಲಿ ಮಾನಸಿಕ ಬೆಳವಣಿಗೆ ತರಲು ಶ್ರಮಿಸಿದರು. ಪೋಷಕರ ಮೂಲಕ ರಾಜ್ಯದ ಅನೇಕರನ್ನು ಶಾಲೆಯತ್ತ ಸೆಳೆದರು. ಇಲ್ಲಿ ಕಲಿತ ಅನೇಕರು ಮಾನಸಿಕ, ದೈಹಿಕ ಸಮಸ್ಯೆ ಮೀರಿ ಬೆಳೆದಿರುವುದು ವಿಶೇಷ. ಅವರೊಂದಿಗೆ ಟಿ.ಜಿ.ಗಾಯತ್ರಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ವಲೀನತೆ (ಆಟಿಸಂ), ಸೆರಬ್ರಲ್ ಪಾಲಿಸಿ, ಕಲಿಕಾ-ದೈಹಿಕ ನ್ಯೂನತೆ, ಶ್ರವಣ ದೋಷ, ಬೌದ್ಧಿಕ ಅಸಮರ್ಥತೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಮೂರ್ಛೆ, ಮಾತು, ಸಂಧಿವಾತ, ದುರ್ಬಲತೆ ರೋಗಗಳಿಂದ ಬಳಲುತ್ತಿರುವ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಂತಹ ಮಕ್ಕಳಿಗಾಗಿ ನೆಲದ ಮೇಲೆ ಓಡಾಟದ ಚಟುವಟಿಕೆ, ಸಾಧನ ಸಲಕರಣೆ, ಊಟ, ಬಟ್ಟೆ ಧರಿಸುವುದು, ಓದುವುದು, ಬರೆಯುವುದು, ಶೌಚ, ಪುನರಾವರ್ತಿತ ಭಾಷೆ, ಅಭಿವ್ಯಕ್ತಿ ಭಾಷೆ, ಸಾಮಾಜಿಕ ಸಂವಹನ, ಅಂಗಮರ್ಧನ, ಅಂಕೆಗಳ ಬಳಕೆ, ಸಮಯ, ಗೃಹ ಚಟುವಟಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಮಕ್ಕಳಿಗೆ ಹಾಡು ಹೇಳಿ ಕೊಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.