ನರಸಿಂಹ
ಆನವಟ್ಟಿ: ಇಲ್ಲಿನ ಕುಬಟೂರು ಗ್ರಾಮದ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ನರಸಿಂಹಸ್ವಾಮಿ ಮೂರ್ತಿಯನ್ನು ವಿರೂಪಗೊಳಿಸಿದ್ದ ಆರೋಪದ ಮೇಲೆ ಆನವಟ್ಟಿ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಗೊಂದಿ ಗ್ರಾಮದ ಕೋಟೇಶ್ವರ (32) ಬಂಧಿತ. ಪಿಎಸ್‌ಐ ಚಂದನ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿಯ ಮೇರೆಗೆ ಈತನನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ದೇವಸ್ಥಾನದ ವಿಗ್ರಹ ವಿರೂಪಗೊಂಡಿರುವುದು ಮಂಗಳ ವಾರ ಬೆಳಿಗ್ಗೆ ಗೊತ್ತಾಗಿದೆ. ಗ್ರಾಮಸ್ಥರು ದೇವರ ದರ್ಶನಕ್ಕೆ ಹೋದಾಗ ದೇಗುಲದ ಬಾಗಿಲು ತೆರೆದಿರುವುದು ಕಂಡುಬಂದಿದೆ. ನಿಧಿಗಾಗಿ ಕಳ್ಳರು ಸಂಚು ಮಾಡಿರಬಹುದು ಎಂಬ ಶಂಕೆಯಿಂದ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿವೈಎಸ್ಪಿ, ಸಿಪಿಐ, ಪಿಎಸ್ಐ ಜೊತೆಗೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
ದೇವಸ್ಥಾನಕ್ಕೆ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಯುವಕನೊಬ್ಬ ದೇಗುಲವನ್ನು ಪ್ರವೇಶಿಸಿರುವುದು ಗೊತ್ತಾಗಿದೆ. ಪೊಲೀಸರು ವಿಚಾರಿಸಿದಾಗ, ಆತ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿದೆ. ತನ್ನ ಗ್ರಾಮದಲ್ಲೂ ದೇವರ ವಿಗ್ರಹಗಳನ್ನು ಆತ ಹೊಳೆಗೆ ಎಸೆದಿದ್ದ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.