ಶಿವಮೊಗ್ಗ: ‘ಮಹಿಳೆಯರ ಬರಹವೆಂದರೆ ಅದು ಅಡುಗೆ ಮನೆ ಸಾಹಿತ್ಯ ಎಂದು ನಿರ್ಲಕ್ಷ್ಯ ಮಾಡುತ್ತಿದ್ದ ಕಾಲದಲ್ಲಿ ಅದೇ ಮಹಿಳಾ ಸಾಹಿತ್ಯ ಬೂಕರ್ ಪ್ರಶಸ್ತಿ ಮೂಲಕ ವಿಶ್ವ ಮನ್ನಣೆ ತಂದುಕೊಟ್ಟಿದೆ’ ಎಂದು ಲೇಖಕಿ ಅಕ್ಷತಾ ಹುಂಚದಕಟ್ಟೆ ಅಭಿಪ್ರಾಯಪಟ್ಟರು.
ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಈಚೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಕ್ರಿಯಾಶೀಲತೆಯ ಒಳನೋಟ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿ ಕುರಿತ ಚರ್ಚೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
‘ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರೆತ ಕಾರಣ ಜಗತ್ತು ಕನ್ನಡ, ಕರ್ನಾಟಕವನ್ನು ವಿಶೇಷ ಆಸಕ್ತಿಯಿಂದ ನೋಡುವ ಕಾಲ ಬಂದಿದೆ. ಪುರುಷರು ಬರೆದ ಸಾಹಿತ್ಯಕ್ಕೆ ಇರುವ ಮಾನ್ಯತೆಯಷ್ಟೇ ಹೆಣ್ಣುಮಕ್ಕಳು ಬರೆದ ಸಾಹಿತ್ಯಕ್ಕೂ ದೊರೆಯಬೇಕು. ಪ್ರತ್ಯೇಕಿಸದೆ ಒಗ್ಗಟ್ಟಿನಿಂದ ಒಳಗೊಳ್ಳುವಿಕೆಯಲ್ಲಿ ಜಗತ್ತು ಬೆಳಗಬೇಕು’ ಎಂದು ಹೇಳಿದರು.
ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಿದ ಸಾಹಿತಿ ಜೆ.ಕೆ.ರಮೇಶ್ ಮಾತನಾಡಿ, ‘ಕ್ರಿಯಾಶೀಲತೆಯ ಒಳನೋಟಕ್ಕೆ ಹೊರನೋಟವೂ ಇದೆ. ಮಲೆನಾಡಿನ ಚಿತ್ರಣವಿಲ್ಲಿದೆ. ಜಿಲ್ಲೆಯ ನಕ್ಷೆ, ರಾಷ್ಟ್ರಕವಿಯ ಚಿತ್ರ ಎಲ್ಲವನ್ನೂ ಒಳಗೊಂಡಿದೆ. ಪರಿಷತ್ತು ಚಟುವಟಿಕೆಗಳು, ಅತಿಥಿಗಳ ಮಾತು, ನಾಲ್ಕು ಸಮ್ಮೇಳನಗಳ ಭಾಷಣಗಳ ಸಂಗ್ರಹಗಳಲ್ಲಿ 125 ಜನರ ಭಾಷಣಗಳ ಟಿಪ್ಪಣಿಗಳಿವೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಮಂಜಪ್ಪ ನಿರೂಪಿಸಿದರು. ಡಾ.ವಿಜಯಾದೇವಿ, ಎಂ. ನವೀನ್ ಕುಮಾರ್, ಕೆ.ಎಸ್. ಹುಚ್ಚರಾಯಪ್ಪ, ಮಂಜುನಾಥ ಕಾಮತ್, ಎಚ್. ಎಸ್. ರಘು, ಮಹಾದೇವಿ, ಎಚ್. ತಿಮ್ಮಪ್ಪ ಭದ್ರಾವತಿ, ಎಂ.ಇ. ಜಗದೀಶ್, ಮೋಹನ್ ಕುಮಾರ್, ಡಿ. ಗಣೇಶ್ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.