ಭದ್ರಾವತಿ: ರಾಷ್ಟ್ರೀಯತೆಯನ್ನು ಒಪ್ಪದವರು ಮಾತ್ರ ಬದಲಾವಣೆಗೆ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ಧರ್ಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಎಂದು ಚಿಂತಕ ಪ್ರೊ.ಸುಧಾಕರ್ ಹೊಸಹಳ್ಳಿ ಅಭಿಪ್ರಾಯಪಟ್ಟರು.
ಹಳೇ ನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಮಂಥನ ವೇದಿಕೆಯಿಂದ ಭಾನುವಾರ ಏರ್ಪಡಿಸಿದ್ದ ‘ಅಂಬೇಡ್ಕರ್ ಮತ್ತು ಇಸ್ಲಾಂ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಈ ನೆಲ, ಜಲದ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆಯೇ ಹೊರತು ಅದು ಯಾವುದೇ ವಿದೇಶಿ ಮನಸ್ಥಿತಿಗೆ ತಕ್ಕಂತೆ ರಚನೆ ಆಗಿಲ್ಲ. ಹಾಗಾಗಿ ಇಲ್ಲಿ ಬದುಕುವ ಪ್ರತಿಯೊಬ್ಬರೂ ಸಂವಿಧಾನ ಗೌರವಿಸುವುದು ಅವಶ್ಯಕ, ಅನಿವಾರ್ಯ. ಆದರೆ ಈ ನೆಲದ ಸಂಸ್ಕೃತಿ ಮರೆತು ಬೇರೆ ಚಿಂತನೆಗೆ, ಸಂವಿಧಾನಕ್ಕಿಂತ ನಾವೇ ಶ್ರೇಷ್ಠ ಎಂದು ಭಾವಿಸುವ ಮಂದಿಗೆ ಈ ನೆಲದ ಭಾವನೆ ಅರ್ಥವಾಗುವುದಿಲ್ಲ. ಹಾಗಾಗಿ ಇಲ್ಲಿಯ ಸಂಸ್ಕೃತಿಗೆ ಗೌರವ ಕೊಡದ ಯಾರೂ ಸಹ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಭಾವಿಸಬೇಕು ಎಂದರು.
ಸಂವಿಧಾನವೇ ಶ್ರೇಷ್ಠ ಹೊರತು, ಧರ್ಮದ ವೈಯಕ್ತಿಕ ಆಕಾಂಕ್ಷಿಗಳು ಶ್ರೇಷ್ಠವಾಗುವುದಿಲ್ಲ. ದೇಶಕ್ಕೆ ಒಂದು ಸಂವಿಧಾನ ಇರುವಾಗ ಷರಿಯತ್ ಕಾನೂನುಗಳು ನಮಗೆ ಅನ್ವಯ ಎಂಬ ಮನಸ್ಥಿತಿ ಇರುವವರಿಗೆ ಸಂವಿಧಾನಕ್ಕಾಗಲಿ, ದೇಶಕ್ಕಾಗಲಿ ಗೌರವ ಕೊಡುವ ಮನೋಭಾವನೆ ಇರುವುದಿಲ್ಲ.
ಇಲ್ಲಿಯ ನೆಲದ ಚಿಂತನೆಗೆ ತಕ್ಕಂತೆ ಸಂವಿಧಾನದ ಅಶೋತ್ತರಗಳು ಇರುತ್ತವೆಯೇ ಹೊರತು ಪರಕೀಯ ಮನೋಭಾವದ ಚಿಂತನೆ ಇರುವವರಿಗೆ ಈ ಸಂವಿಧಾನದ ಅಶೋತ್ತರ ಅರಿವು ಇರುವುದಿಲ್ಲ. ಅವರು ಎಲ್ಲಿದ್ದರೂ ಸಂವಿಧಾನ ವಿರೋಧಿಗಳು ಈ ನೆಲದ ಗೌರವ ಎಂದರೆ ಅದು ರಾಷ್ಟ್ರೀಯತೆ, ರಾಷ್ಟ್ರಕ್ಕೆ ಗೌರವಿಸುವುದು ಎಂದು ಅರ್ಥ. ಈ ಅಶೋತ್ತರಗಳೇ ಸಂವಿಧಾನದ ಭಾಗವಾಗಿದೆ. ಇದನ್ನೇ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದು ಎಂದರು.
ನಂತರ ನಡೆದ ಸಂವಾದದಲ್ಲಿ ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವೀರಶೈವ ಸಮಾಜದ ಅಧ್ಯಕ್ಷ ಆರ್.ಮಹೇಶ್ ಕುಮಾರ್ ವಹಿಸಿದ್ದರು. ಕೆ.ಎನ್ ಶ್ರೀಹರ್ಷ ಪ್ರಾಸ್ತಾವಿಕ ಮಾತನಾಡಿದರು. ಕೀರ್ತಿ ಗುಜ್ಜಾರ್ ಕಾರ್ಯಕ್ರಮ ನಿರೂಪಿಸಿದರು. ಆಶಾ ಸುದೀಪ್ ಪ್ರಾರ್ಥಿಸಿದರು. ತಾರಾ ನಾಗರಾಜ್ ಅತಿಥಿ ಪರಿಚಯ ಮಾಡಿದರು. ರವಿ ವಂದನಾರ್ಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.