ಭದ್ರಾವತಿ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಜನರು ತಂಪು ಪಾನೀಯ, ಕಬ್ಬಿನ ಹಾಲು, ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ, ಸೌತೆಕಾಯಿ ಹೀಗೆ ದಾಹ ತಣಿಸುವ ಹಣ್ಣು-ಹಂಪಲುಗಳಿಗೆ ಮೊರೆ ಹೋಗುತ್ತಿದ್ದಾರೆ.
ತಾಲ್ಲೂಕಿನಲ್ಲಿ ಎಲ್ಲಿ ನೋಡಿದರೂ ತಂಪು ಪಾನೀಯ, ಕಬ್ಬಿನ ಹಾಲಿನ ಅಂಗಡಿ ತೆರೆದಿದ್ದು ಬೇಡಿಕೆ ಹೆಚ್ಚಾಗಿದೆ.
ನಗರದ ಗಾಂಧಿ ವೃತ್ತ, ರಂಗಪ್ಪ ಸರ್ಕಲ್, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಹೊಸಮನೆ, ಸಂತೆ ಮೈದಾನ, ಬಸವೇಶ್ವರ ವೃತ್ತ, ತಾಲ್ಲೂಕು ಕಚೇರಿ ರಸ್ತೆ, ಕೋರ್ಟ್ ರಸ್ತೆ ಸೇರಿದಂತೆ ಜನ ದಟ್ಟಣೆಯ ಹಲವು ಸ್ಥಳಗಳಲ್ಲಿ ಕಬ್ಬಿನ ಹಾಲಿನ ಮಾರಾಟ ಜೋರಾಗಿದೆ.
ಕಬ್ಬಿನ ದರ ಹೆಚ್ಚಳ: ನಗರದ ಎಂ.ಪಿ.ಎಂ ಸಕ್ಕರೆ ಕಾರ್ಖಾನೆ ಮುಚ್ಚಿದ ಪರಿಣಾಮ ಸ್ಥಳೀಯ ರೈತರು ಕಬ್ಬು ಬೆಳೆಯುವುದು ಮರೆತುಬಿಟ್ಟಿದ್ದಾರೆ. ಕಬ್ಬು ಬೆಳೆಗಾರರೆಲ್ಲ ಅಡಿಕೆ ಬೆಳೆಯುತ್ತಿದ್ದು, ಸ್ಥಳೀಯವಾಗಿ ಕಬ್ಬಿನ ಕೊರತೆ ಎದುರಾಗಿದೆ. ರೈತರಿಂದ ನೇರವಾಗಿ ಕಬ್ಬು ದೊರೆಯದೇ ಮಧ್ಯವರ್ತಿಗಳ ಮೊರೆ ಹೋಗಬೇಕಿದೆ. ಇದು ಕಬ್ಬಿನ ದರ ಏರಿಕೆಗೆ ಕಾರಣವಾಗಿದೆ.
ಮಧ್ಯವರ್ತಿಗಳ ಬಳಿ 1 ಟನ್ ಕಬ್ಬಿಗೆ ₹ 14ರಿಂದ ₹ 15,000 ಕೊಡಬೇಕು. ಹೊಸನಗರ, ಮಹಾರಾಷ್ಟ್ರ, ರಿಪ್ಪನ್ ಪೇಟೆ, ಹಾವೇರಿ ಸೇರಿದಂತೆ ದೂರದ ಊರುಗಳಿಂದ ಕಬ್ಬು ತರಿಸಲಾಗುತ್ತಿದೆ ಎಂದು ಬಸವೇಶ್ವರ ವೃತ್ತದ ಕಬ್ಬಿನ ಹಾಲಿನ ವ್ಯಾಪಾರಿ ನಾಗರಾಜ್ ತಿಳಿಸಿದರು.
ಕಬ್ಬಿನ ಹಾಲಿಗೆ ದರ ಕಡಿಮೆ: ಇತರೆ ತಂಪು ಪಾನೀಯಗಳಿಗೆ ಹೋಲಿಸಿದ್ದಲ್ಲಿ, ಕಬ್ಬಿನ ಹಾಲಿನ ದರ ಕಡಿಮೆ ಇದೆ. ಕಬ್ಬಿನ ಹಾಲು ₹ 15ರಿಂದ ₹ 20 ದೊರೆಯುತ್ತದೆ. ಇತರೆ ಹಣ್ಣಿನ ತಂಪು ಪಾನಿಯಗಳು ₹ 60ರಿಂದ ₹ 70 ದರ ನಿಗದಿಯಾಗಿದೆ. ಇದರಿಂದ ಕಬ್ಬಿನ ಹಾಲಿಗೆ ಗ್ರಾಹಕರ ಬೇಡಿಕೆ ಹೆಚ್ಚಿರುತ್ತದೆ. ಅಂತೆಯೇ ದುಪ್ಪಟ್ಟು ವ್ಯಾಪಾರ ಬೇಸಿಗೆಯಲ್ಲಿ ಇರುತ್ತದೆ. ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೂ ಗ್ರಾಹಕರು ಬರುತ್ತಿದ್ದಾರೆ.
ಸ್ಥಳೀಯವಾಗಿ ಕಬ್ಬು ದೊರೆತಲ್ಲಿ ರೈತರಿಂದ ನೇರವಾಗಿ ಕಬ್ಬು ಪಡೆದು ಇನ್ನು ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನ್ಯೂಟೌನ್ ಚರ್ಚ್ ಮೈದಾನದಲ್ಲಿ ಕಬ್ಬಿನ ಹಾಲು ವ್ಯಾಪಾರ ಮಾಡುವ ಪ್ರವೀಣ್ ತಿಳಿಸಿದರು.
ಕಲ್ಲಂಗಡಿಗೂ ಬೇಡಿಕೆ: ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳು ಶಾಮಿಯಾನ ಹಾಕಿ ಹತ್ತಾರು ಟನ್ ಕಲ್ಲಂಗಡಿ ತಂದು ವಹಿವಾಟು ನಡೆಸುತ್ತಿದ್ದಾರೆ. ನಗರದ ಅನೇಕ ಸ್ಥಳಗಳಲ್ಲಿ, ಹೆಚ್ಚಾಗಿ ನಗರದ ಗಡಿ ರಸ್ತೆ, ಬೈಪಾಸ್ ರಸ್ತೆಗಳಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ₹ 200 ರಿಂದ ₹ 300 ಕೊಟ್ಟು ಖರೀದಿಸುತ್ತಿದ್ದಾರೆ ಎಂದು ಕಲ್ಲಂಗಡಿ ಹಣ್ಣಿನ ವ್ಯಾಪಾರಿ ನಂದೀಶ್ ತಿಳಿಸಿದರು.
ಪೆಪ್ಸಿ, ಕೋಕಾ ಕೋಲಾದಂತಹ ಹಾನಿಕಾರಕ ತಂಪು ಪಾನೀಯಗಳ ತೊರೆದು, ರಸ್ತೆ ಬದಿಗಳಲ್ಲಿ ತಳ್ಳು ಗಾಡಿ, ಟೆಂಟ್, ಪೆಟ್ಟಿಗೆ ಅಂಗಡಿಗಳಲ್ಲಿ ತಯಾರಿಸುವ ತಾಜಾ ಹಣ್ಣಿನ ಪಾನೀಯಗಳಿಗೆ ಮೊರೆ ಹೋಗಿದ್ದಾರೆ.
ನೈಸರ್ಗಿಕ ತಂಪು ಪಾನೀಯಗಳಿಗೆ ಬೇಡಿಕೆಯಾಗಿದೆ. ಇದರಿಂದಾಗಿ ರಸ್ತೆ ಬದಿಯಲ್ಲಿ ತಾಜಾ ಹಣ್ಣಿನರಸದ ಅಂಗಡಿಗಳು ತಲೆ ಎತ್ತಿವೆ. ಬೇಸಿಗೆಯ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗಿದ್ದು ಎಲ್ಲೆಡೆ ಕಾಣಸಿಗುತ್ತದೆ.
ಆಯಾ ಋತುಮಾನಗಳಿಗೆ ಅನುಗುಣವಾಗಿ ಹಣ್ಣುಗಳ ಬೇಡಿಕೆ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿ. ಈ ಹಣ್ಣಿನಲ್ಲಿ ಶೇ 95ರಷ್ಟು ನೀರಿನಾಂಶವಿದ್ದು, ಇದನ್ನು ಸೇವನೆ ಮಾಡಿದಾಗ ದೇಹಕ್ಕೆ ಬೇಕಾಗುವ ನೀರಿನಾಂಶ ದೊರೆಯುತ್ತದೆ. ಅದೇ ರೀತಿ ಕಲ್ಲಂಗಡಿ ಹಣ್ಣಿನ ಸಿಪ್ಪೆ, ಬೀಜವನ್ನು ಕೂಡ ಬಳಕೆ ಮಾಡಬಹುದು. ನಿಂಬೆ, ಕಸ್ತೂರಿ ಬೀಜ, ಸೌತೆಕಾಯಿ, ಹೆಚ್ಚು ನೀರು ಕುಡಿಯುವುದು, ನೀರಿನಾಂಶವುಳ್ಳ ಆಹಾರ ಸೇವನೆ ಇವು ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಅಶೋಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಂ.ಪಿ.ಎಂ. ಕಾರ್ಖಾನೆ ಮುಚ್ಚಿರುವ ಪರಿಣಾಮ ಸ್ಥಳೀಯವಾಗಿ ಕಬ್ಬು ಬೆಳೆ ಕುಂಠಿತವಾಗಿದ್ದು, ಕಬ್ಬು ಬಳಕೆದಾರರು, ಆಲೆಮನೆ ನಡೆಸುವವರು ಬೇರೆ ಊರುಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ‘ ಎಂದು ಸ್ಥಳೀಯ ಆಲೆಮನೆ ಮಾಲೀಕ ಜಗ್ಗೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.