ADVERTISEMENT

ಶಿವಮೊಗ್ಗ: ಕಲ್ಲಹಳ್ಳಿ ಬಳಿ ನೂತನ ಶಿಲಾಯುಗದ ಕೈಬಾಚಿ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 10:51 IST
Last Updated 30 ಮಾರ್ಚ್ 2021, 10:51 IST
ಪತ್ತೆಯಾಗಿರುವ ಆಯುಧ
ಪತ್ತೆಯಾಗಿರುವ ಆಯುಧ   

ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಕಲ್ಲಹಳ್ಳಿ ಗ್ರಾಮದ ಕೆ.ಆರ್.ವೆಂಕಟೇಶ ಅವರ ಬಸವೇಶನಮಟ್ಟಿ ತೋಟದಲ್ಲಿ ನೂತನ ಶಿಲಾಯುಗದ ಆಯುಧ ಪತ್ತೆಯಾಗಿದೆ.

ನೂತನ ಶಿಲಾಯುಗದ ಮಾನವನು ಅಲೆಮಾರಿ ಜೀವನ ಬಿಟ್ಟು ಒಂದು ಸ್ಥಳದಲ್ಲಿ ನೆಲೆನಿಲ್ಲಲು ಆರಂಭಿಸಿದ ಕಾಲಘಟ್ಟ. ಕಲ್ಲಿನ ಉಪಕರಣಗಳು, ಚಕ್ರಗಳ ಸಹಾಯದಿಂದ ಮಡಿಕೆ ತಯಾರಿಸುವುದು, ಮಾಂಸ ಮತ್ತಿತರ ಪಾನಿಯಗಳನ್ನು ಸಂಗ್ರಹಿಸಲು ಸುಟ್ಟ ಮಣ್ಣಿನ ಪಾತ್ರೆ ಬಳಕೆ, ಬೆತ್ತದಲ್ಲಿ ಹೆಣೆದ ಬುಟ್ಟಿಗಳನ್ನು ತಯಾರಿಸುವುದು, ಪಶು ಸಂಗೋಪನೆ, ಆರಂಭಿಕ ಹಂತದ ಬೇಸಾಯ ಈ ಕಾಲಘಟ್ಟದ ವಿಶೇಷ.

ಈ ಯುಗಕ್ಕೆ ಸೇರಿದ ಶಿಲೆಯಿಂದ ಮಾಡಿದ ಕೈಬಾಚಿ ಹಾಗೂ ಮಡಿಕೆಯ ಚೂರುಗಳು ಸ್ಥಳದಲ್ಲಿ ಪತ್ತೆಯಾಗಿವೆ. 17 ಸೆಂ.ಮೀ ಉದ್ದ, 6 ಸೆಂ.ಮೀ ಆಗಲ ಇರುವ ಕಪ್ಪು ಡೈಕ್ ಶಿಲೆಯ ಈ ಕೈಬಾಚಿಗೆ ಕಟ್ಟಿಗೆ ಕಟ್ಟಿ ಕೈಕೊಡಲಿ ರೀತಿ ಬಳಸಲಾಗಿದೆ. ಮೊನಾಚಾದ ಹಿಡಿ, ಚೂಪಾದ ಕತ್ತರಿಸುವ ಅಂಚು ಹೊಂದಿದೆ.

ADVERTISEMENT

ಇದು ಶಿಲಾಯುಗದ ನೆಲೆ ಎಂದು ಗುರುತಿಸಲು ಹತ್ತಿರದಲ್ಲೇ ಕಲ್ಲು ಹಳ್ಳ, ಸಾಕಷ್ಟು ಕುಳಿಗಳು ಪತ್ತೆಯಾಗಿವೆ. ಈ ನೆಲೆಯ ಕಾಲಮಾನ ಕ್ರಿ.ಪೂ 2500 ರಿಂದ ಕ್ರಿ.ಪೂ 1800 ಇರಬಹುದು. ಜಿಲ್ಲೆಯಲ್ಲಿ ಇದುವರೆಗೂ ಸುಮಾರು 27 ನೂತನ ಶಿಲಾಯುಗದ ನೆಲೆಗಳು ಕಂಡುಬಂದಿವೆ. ಭದ್ರಾವತಿ ತಾಲ್ಲೂಕಿನ ಆನವೇರಿ, ಅಶೋಕನಗರ, ನಾಗಸಮುದ್ರ, ನಿಂಬೆಗೊಂದಿ, ಭಗವತಿಕೆರೆ, ಮತಿಘಟ್ಟ, ವಡೇರಪುರ, ಸಿಂಗನಮನೆ, ಗೋಣಿಬೀಡು, ಬಿ.ಆರ್.ಪ್ರಾಜೆಕ್ಟ್‌ ನೆಲೆಗಳು ಪತ್ತೆಯಾಗಿವೆ. ಈ ಶಿಲಾಯುಧ ಪತ್ತೆ ಮಾಡಲು ಜೆಡಿಯು ಉಪಧ್ಯಾಕ್ಷ ಶಶಿಕುಮಾರ ಗೌಡ, ಕಲ್ಲಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ನೆರವಾಗಿದ್ದಾರೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.