ADVERTISEMENT

ಪರ್ಯಾಯ ರಸ್ತೆ ಕಲ್ಪಿಸದೆ ಕಾಮಗಾರಿ ಬ್ರಾಹ್ಮಣ ಕೆಪ್ಪಿಗೆ ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 6:51 IST
Last Updated 9 ಅಕ್ಟೋಬರ್ 2021, 6:51 IST
ಸಾಗರ ತಾಲ್ಲೂಕಿನ ತುಮರಿ-–ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೇ ಇರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಸಾಗರ ತಾಲ್ಲೂಕಿನ ತುಮರಿ-–ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೇ ಇರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಸಾಗರ: ತಾಲ್ಲೂಕಿನ ತುಮರಿ-ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ‘ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೇ ಕಾಮಗಾರಿ ಕೈಗೊಂಡಿರುವುದರಿಂದ ಈ ಭಾಗದ ಹಲವು ಗ್ರಾಮಗಳಿಗೆ ಸಂಪರ್ಕ ವ್ಯವಸ್ಥೆ ಸ್ಥಗಿತಗೊಂಡಿದೆ. ಕಿರುವಾಸೆ, ಬ್ರಾಹ್ಮಣ ಕೆಪ್ಪಿಗೆ, ಅರಬಳ್ಳಿ, ನಾಡಕೆಪ್ಪಿಗೆ, ಜಡ್ಡಿನಬೈಲು, ಬೆದರಕೊಪ್ಪ ಮುಂತಾದ ಗ್ರಾಮಗಳ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಇದರಿಂದ ತೊಂದರೆಯಾಗಿದೆ’ ಎಂದು ದೂರಿದರು.

ಕಾಮಗಾರಿ ನಡೆಯುತ್ತಿರುವ ಪಕ್ಕದಲ್ಲಿ ಕಚ್ಚಾ ರಸ್ತೆಯ ಮೂಲಕ ಸಂಚರಿಸಲು ಹೊರಟಿದ್ದ ಬಸ್ ಕೆಸರಿನಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದರು.

ADVERTISEMENT

ಅರಬಳ್ಳಿಯ ಹಿರಿಯ ನಾಗರಿಕ ಗೋಪಾಲಕೃಷ್ಣ ಭಟ್, ‘ಬದಲಿ ರಸ್ತೆಯ ವ್ಯವಸ್ಥೆ ಮಾಡಿಕೊಳ್ಳದೆ ಕಾಮಗಾರಿ ನಡೆಸುತ್ತಿರುವ ಕ್ರಮ ಅವೈಜ್ಞಾನಿಕ. ಜನರಿಗೆ ತೊಂದರೆಯಾಗುತ್ತದೆ ಎನ್ನುವುದು ಗೊತ್ತಿದ್ದರೂ ಅಧಿಕಾರಿಗಳು ಉಪೇಕ್ಷೆ ಮಾಡುವುದು ಜನತಂತ್ರ ವಿರೋಧಿ ನೀತಿ’ ಎಂದು ಟೀಕಿಸಿದರು.

ಪ್ರಮುಖರಾದ ಸುರೇಶ್, ರವಿ ಮೇಸ್ತ್ರಿ, ಕೃಷ್ಣ, ಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.