ADVERTISEMENT

ಶಿಕಾರಿಪುರ: ಮೋದಿ ಆಡಳಿತದಲ್ಲಿ ಜಗತ್ತು ಭಾರತದತ್ತ ನೋಡುತ್ತಿದೆ

ಸೇವೆ ಸಮರ್ಪಣೆ ಸಮಾರೋಪ ಸಮಾರಂಭದಲ್ಲಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 6:11 IST
Last Updated 8 ಅಕ್ಟೋಬರ್ 2021, 6:11 IST
ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನರೇಂದ್ರ ಮೋದಿ 71ನೇ ಜನ್ಮದಿನದ ಪ್ರಯುಕ್ತ ನಡೆದ ಸೇವಾ ಸಮರ್ಪಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.
ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನರೇಂದ್ರ ಮೋದಿ 71ನೇ ಜನ್ಮದಿನದ ಪ್ರಯುಕ್ತ ನಡೆದ ಸೇವಾ ಸಮರ್ಪಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದರು.   

ಶಿಕಾರಿಪುರ:ಜಗತ್ತು ಭಾರತದ ಕಡೆ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಪ್ರಯುಕ್ತ ನಡೆದ ಸೇವೆ ಸಮರ್ಪಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮೋದಿ ಅವರು ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನೀಡಿದ್ದಾರೆ. ತಾಲ್ಲೂಕಿನಲ್ಲಿ ಮೋದಿ ಜನ್ಮದಿನವನ್ನು ಸೇವೆ ಸಮರ್ಪಣೆ ಹೆಸರಿನಲ್ಲಿ ಉತ್ತಮ ರೀತಿ ಆಚರಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸ್ಥಾನಮಾನದ ನಿರೀಕ್ಷೆ ಇಲ್ಲದೇ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.

ADVERTISEMENT

‘ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿ ಹಲವು ಶರಣ, ಶರಣೆಯರು ತಾಲ್ಲೂಕಿನಲ್ಲಿ ಜನ್ಮ ತಾಳಿರುವುದು ಸಂತೋಷದ ಸಂಗತಿ. ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರುತ್ತಿರುವುದು ತೃಪ್ತಿ ತಂದಿದೆ. ಯಾವುದೇ ಸ್ಥಾನಮಾನದ ನಿರೀಕ್ಷೆ ಇಲ್ಲದೆ ರಾಜ್ಯದಾದ್ಯಂತ ಪಕ್ಷ ಸಂಘಟನೆಗೆ ಸರ್ಕಾರದ ಕಾರನ್ನು ಬಿಟ್ಟು, ನನ್ನ ಸ್ವಂತ ವಾಹನದಲ್ಲಿ ಪ್ರವಾಸ ನಡೆಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಪಕ್ಷ ಬಲಪಡಿಸುತ್ತೇನೆ’ ಎಂದರು.

ಸಂಸದ ಬಿ.ವೈ.ರಾಘವೇಂದ್ರ, ‘ಪ್ರಧಾನಿ ನರೇಂದ್ರ ಮೋದಿ ಮಹಿಳೆಯರು, ಕೂಲಿಕಾರ್ಮಿಕರು ಸೇರಿ ಎಲ್ಲಾ ವರ್ಗದ ಜನರ ಬಗ್ಗೆ ಚಿಂತನೆ ಮಾಡುತ್ತಾರೆ. ಮೋದಿ ದೇಶ ಭಕ್ತ ಪ್ರಧಾನಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಜಾತಿ ಜನರ ಅಭಿವೃದ್ಧಿಗಾಗಿ ಪೂರಕವಾಗುವ ಕಾರ್ಯಕ್ರಮ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ‘ಮೋದಿ ಜನ್ಮದಿನ ಪ್ರಯುಕ್ತ ನೇತ್ರ ತಪಾಸಣೆ ಸೇರಿ ಹಲವು ಸೇವಾ ಕಾರ್ಯಕ್ರಮಗಳು ನಡೆದಿವೆ. ಬಿಜೆಪಿ ದೇಶಭಕ್ತರ ಪಕ್ಷವಾಗಿದ್ದು, ತತ್ವ ಸಿದ್ಧಾಂತವನ್ನು ಹೊಂದಿದೆ. ಹಿರಿಯರು ಪಕ್ಷ ಸಂಘಟನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಕಾರ್ಯಕರ್ತರು ಜಾತಿ ಭೇದ ಮರೆತು ಪಕ್ಷ ಸಂಘಟಿಸಬೇಕು’ ಎಂದು ಸಲಹೆ ನೀಡಿದರು.

ಮುಖಂಡರಾದ ಭದ್ರಾಪುರ ಹಾಲಪ್ಪ, ವೀರೇಂದ್ರ ಪಾಟೀಲ್, ಜೆ.ಸುಕೇಂದ್ರಪ್ಪ, ಕಬಾಡಿ ರಾಜಪ್ಪ, ತೊಗರ್ಸಿ ಸಣ್ಣ ಹನುಮಂತಪ್ಪ, ಬಂಗಾರಿನಾಯ್ಕ, ಚುರ್ಚಿಗುಂಡಿ ರುದ್ರಮುನಿ, ಬಿ.ಡಿ. ಭೂಕಾಂತ್, ರುದ್ರಪ್ಪಯ್ಯ, ನಿವೇದಿತಾ ರಾಜು, ಗಾಯತ್ರಿ ದೇವಿ, ಎ.ಬಿ. ಸುಧೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.