ADVERTISEMENT

ರಂಗಾಯಣದಲ್ಲಿ ನಾಟಕ ಪ್ರದರ್ಶನ: ಸಂದೇಶ್ ಜವಳಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:35 IST
Last Updated 26 ಜನವರಿ 2022, 3:35 IST
ಸಂದೇಶ್‌ ಜವಳಿ
ಸಂದೇಶ್‌ ಜವಳಿ   

ಶಿವಮೊಗ್ಗ: ಇಲ್ಲಿನ ಸುವರ್ಣ ಸಂಸ್ಕೃತಿ ಭವನದಲ್ಲಿ ಜ.26ರಂದು ಸಂಜೆ 6.30ಕ್ಕೆ‘ವಿ ದ ಪೀಪಲ್ ಆಫ್ ಇಂಡಿಯಾ’ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸರ್ಕಾರದ ‘ಸರ್ವರಿಗೂ ಸಂವಿಧಾನ’ ಯೋಜನೆ ಅಡಿ ಭಾರತೀಯ ಸಂವಿಧಾನವನ್ನು ಸಮಾಜದ ವಿವಿಧ ವರ್ಗಗಳಿಗೆ ಸುಲಭವಾಗಿ ಅರ್ಥೈಸಲು ಸಹಾಯವಾಗುವಂತೆ ಸಂವಿಧಾನದ ಕುರಿತು ನಾಟಕ ಸಿದ್ಧಪಡಿಸಲಾಗಿದೆ. ರಂಗಾಯಣ ಈ ನಾಟಕದ ಪ್ರಥಮ ಪ್ರದರ್ಶನ ಆಯೋಜಿಸಿದೆ. ನಾಟಕಕಾರ ಡಾ.ರಾಜಪ್ಪ ದಳವಾಯಿ ನಾಟಕ ರಚಿಸಿದ್ದಾರೆ. ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ನಿರ್ದೇಶಿಸಿದ್ದಾರೆ. 1.25 ತಾಸು ಪ್ರದರ್ಶನಗೊಳ್ಳುವ ಈ ನಾಟಕದಲ್ಲಿ 20 ಕಲಾವಿದರು ಅಭಿನಯಿಸುತ್ತಿದ್ದಾರೆ ಎಂದು ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಮಂಗಳವಾರಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರು ತಿಂಗಳುಗಳಿಂದ ಈ ನಾಟಕ ರಚನೆಯ ಕುರಿತು ಹಲವು ನಾಟಕ ರಚನಾ ಕಮ್ಮಟಗಳು, ವಿಶೇಷ ಉಪನ್ಯಾಸ- ವಿಚಾರಸಂಕಿರಣಗಳನ್ನು ಆಯೋಜಿಸಲಾಗಿತ್ತು. ವಿಶಿಷ್ಟವಾಗಿ ಈ ನಾಟಕ ಕಟ್ಟಲಾಗಿದೆ. ಸಂವಿಧಾನದ ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಮಹಿಳಾ ಹಕ್ಕುಗಳು, ಸಂವಿಧಾನ ಕರಡು ರಚನಾ ಸಮಿತಿಯಲ್ಲಿನ ಚರ್ಚೆಗಳು, ಸಂವಿಧಾನದಲ್ಲಿ ಮಹಿಳೆಯರ ಆಶಯಗಳು ಇತ್ಯಾದಿ ವಿಷಯಗಳನ್ನು ಬಳಸಲಾಗಿದೆ. ಕರ್ನಾಟಕದ ಬೇರೆ ಬೇರೆ ಭಾಗಗಳ ಕಲಾವಿದರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ.

ADVERTISEMENT

ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಒಂಬತ್ತು ಜಿಲ್ಲೆಗಳಲ್ಲಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಈ ನಾಟಕದ ಪ್ರದರ್ಶನ ಆಯೋಜಿಸುವ ಯೋಜನೆ ಇದೆ ಎಂದರು.

ಜ.26ರಂದು ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ. ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಮೇಯರ್ ಸುನೀತಾ ಅಣ್ಣಪ್ಪ, ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಗದೀಶ್, ವಕೀಲರಾದ ಇ.ಪ್ರೇಮಾ, ರಂಗಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ ಭಾಗವಹಿಸುವರು. ಪ್ರವೇಶ ಉಚಿತ. ಜ.27, 28ರಂದು ಸಂಜೆ 6.30ಕ್ಕೆ ನಾಟಕದ ಮರು ಪ್ರದರ್ಶನವಿರುತ್ತದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ, ನಾಟಕದ ನಿರ್ದೇಶಕ ಕೆ.ಪಿ.ಲಕ್ಷ್ಮಣ್, ಆರ್.ಎಸ್.ಹಾಲಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.