
ಹೊಸನಗರ: ‘ತಾಲ್ಲೂಕಿನ ಪ್ರತಿಷ್ಠಿತ ಗ್ರಾಮ ಪಂಚಾಯಿತಿ ಎಂದೇ ಕರೆಸಿಕೊಳ್ಳುವ ಎಂ. ಗುಡ್ಡೆಕೊಪ್ಪ ಗ್ರಾ.ಪಂ.ನಲ್ಲಿ ಆಡಳಿತ ಪಾರದರ್ಶಕವಾಗಿದ್ದು ಜನಸಾಮಾನ್ಯರ ಮೆಚ್ಚುಗೆ ಪಾತ್ರವಾಗಿದೆ. ಆದರೆ, ಇಲ್ಲಿನ ಕೆಲ ಸದಸ್ಯರು ಆಡಳಿತದ ಬಗ್ಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಘನತೆಗೆ ಸರಿಯಲ್ಲ’ ಎಂದು ಅಧ್ಯಕ್ಷ ಜಿ.ಎನ್. ಪ್ರವೀಣ್ ಹೇಳಿದರು.
‘ನನ್ನ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಆದ್ಯತೆ ನೀಡಲಾಗಿದೆ. ಜನಸಾಮಾನ್ಯರಿಗೂ ಆಡಳಿತದಲ್ಲಿನ ಪಾರದರ್ಶಕತೆ ತಿಳಿಯುವಂತೆ ಕರ್ತವ್ಯ ಪಾಲನೆಗೆ ಒತ್ತು ನೀಡಲಾಗಿದೆ. ಆನ್‌ಲೈನ್ ಮೂಲಕ ಸಾಮಾನ್ಯ ಸಭೆ ನಡೆಸಿ ಜನ ಮನ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ವಿವಿಧ ಸೌಲಭ್ಯಗಳು ಮಧ್ಯವರ್ತಿಗಳ ರಹಿತವಾಗಿ ಜನರಿಗೆ ತಲುಪಲು ಅಗತ್ಯ ಕಾರ್ಯ ಕೈಗೊಂಡಿದ್ದೇನೆ. ಇದನ್ನು ಸಹಿಸದೆ ಕೆಲ ಸದಸ್ಯರು ಆಡಳಿತದ ಬಗ್ಗೆ ಮಾತನಾಡುತ್ತಿದ್ದಾರೆ. ಆರೋಪ ಮಾಡುವ ಸದಸ್ಯರು ದಾಖಲೆ ಸಹಿತ ಬಂದರೆ ನಾನು ತನಿಖೆಗೆ ಸದಾ ಸಿದ್ಧನಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ತಿಳಿಸಿದರು.
‘ಕೆಲ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸದೆ ವಿನಾಕಾರಣ ನನ್ನ ವಿರುದ್ಧ ಪಿತೂರಿ ನಡೆಸಲು ಮುಂದಾಗಿದ್ದಾರೆ. ಅಲ್ಲದೆ, ಭ್ರಷ್ಟಾಚಾರದ ಆರೋಪ ಹೊರಿಸಿ ತನಿಖೆ ನಡೆಸುವಂತೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಮನವಿ ನೀಡಿದ್ದಾರೆ. ನಾನು ಯಾವುದೇ ರೀತಿ ತನಿಖೆಗೆ ಸದಾ ಸಿದ್ಧ’ ಎಂದು ಹೇಳಿದರು.
‘ಕಳೆದ ಹತ್ತು ವರ್ಷಗಳಲ್ಲಿ ಈ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಎಲ್ಲಾ ಆಡಳಿತ ವಿರೋಧಿ ಕ್ರಮಗಳನ್ನು ಲೋಕಾಯುಕ್ತ ಪೊಲೀಸರಿಂದ ಸೂಕ್ತ ತನಿಖೆ ನಡೆಸಿದಲ್ಲಿ ಅಕ್ರಮಗಳ ಸರಮಾಲೆಯೇ ಸಾರ್ವಜನಿಕವಾಗಿ ಬಹಿರಂಗಗೊಳ್ಳುವ ವಿಶ್ವಾಸವಿದೆ. ಅದಕ್ಕಾಗಿ ಅಗತ್ಯ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.