ADVERTISEMENT

ಶಾಸಕರ ನಿಧಿ: ಕ್ಷೇತ್ರದ ಜನರ ಅಗತ್ಯಗಳಿಗೆ ಆರಗ ಜ್ಞಾನೇಂದ್ರ ಸ್ಪಂದನ

ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 4:47 IST
Last Updated 22 ನವೆಂಬರ್ 2021, 4:47 IST
ಶಾಸಕರ ಅನುದಾನದಲ್ಲಿ ನಿರ್ಮಾಣವಾದ ಹೊದಲ ಅರಳಾಪುರ ಚಿಟ್ಟಿಮರಡಿ ಸೇತುವೆ
ಶಾಸಕರ ಅನುದಾನದಲ್ಲಿ ನಿರ್ಮಾಣವಾದ ಹೊದಲ ಅರಳಾಪುರ ಚಿಟ್ಟಿಮರಡಿ ಸೇತುವೆ   

ಕೋಣಂದೂರು: ರಾಜ್ಯದ ಗೃಹ ಸಚಿವ, ತೀರ್ಥಹಳ್ಳಿ ಶಾಸಕರೂ ಆಗಿರುವ ಆರಗ ಜ್ಞಾನೇಂದ್ರ ಅವರು ಕಳೆದ ಮೂರು ಅವಧಿಗಳಲ್ಲಿ ಬಂದಿರುವ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಬಹುಪಾಲು ಹಣವನ್ನು ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಳಸುವ ಮೂಲಕ ಕ್ಷೇತ್ರದ ಜನರ ಅಗತ್ಯತೆಗಳಿಗೆ ಸ್ಪಂದಿಸಿದ್ದಾರೆ.

2018-19ನೇ ಸಾಲಿನಲ್ಲಿ ₹ 1.18 ಕೋಟಿ ಬಿಡುಗಡೆಯಾಗಿದ್ದು, ಅಷ್ಟೂ ಹಣ ಖರ್ಚಾಗಿದೆ. 2019-20ನೇ ಸಾಲಿನಲ್ಲಿ ಕೋವಿಡ್ ಕಾರಣ ₹ 61.55 ಲಕ್ಷ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಹಾಗೆಯೇ 2020-21ರಲ್ಲಿ ಬಿಡುಗಡೆಯಾದ
₹ 1 ಕೋಟಿ ಅನುದಾನದಲ್ಲಿ ಕ್ರಿಯಾ ಯೋಜನೆ ಪೂರ್ಣಗೊಂಡಿದ್ದು, ಕೆಲವು ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ.

ಈವರೆಗೆ ಬಿಡುಗಡೆಯಾದ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು ಗ್ರಾಮೀಣ ರಸ್ತೆ, ಸೇತುವೆ, ಚರಂಡಿ, ಗ್ರಂಥಾಲಯ ಕಟ್ಟಡ, ಶಾಲಾ ಕಾಲೇಜು ಆಸ್ಪತ್ರೆ ಕಟ್ಟಡಗಳಿಗೆ ಬಳಸಲಾಗಿದೆ. ರಂಗ ಮಂದಿರ, ಸಭಾಭವನ, ಆಟೊ ಸ್ಟ್ಯಾಂಡ್, ವಿಕಲಚೇತನರಿಗೆ ವಾಹನ, ಶ್ರವಣ ಸಾಧನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ, ರಕ್ತ ನಿಧಿ ಕೇಂದ್ರದ ಯಂತ್ರೋಪಕರಣ ಖರೀದಿಗಾಗಿ, ತೀರ್ಥಹಳ್ಳಿಯ ಜಯ ಚಾಮರಾಜೇಂದ್ರ ಆಸ್ಪತ್ರೆಯ ಕೊರೊನಾ ವಾರ್ಡ್ ದುರಸ್ತಿ, ದೇವಾಲಯ, ಸಹಕಾರ ಸಂಘಗಳ ಕಟ್ಟಡಗಳ ನೆಲಹಾಸು, ಚಾವಣಿ ದುರಸ್ತಿಯಂತಹ ಅಗತ್ಯ ಕಾಮಗಾರಿಗಳನ್ನು ಮಾಡಲಾಗಿದೆ.

ADVERTISEMENT

2020-21ನೇ ಸಾಲಿನ ಅನುದಾನದಲ್ಲಿ ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಟ್ಟೆಮರಡಿ ಸೇತುವೆಯ ಕಾಮಗಾರಿಗೆ ₹ 30 ಲಕ್ಷ ಬಳಸಲಾಗಿದೆ. ಸೀಬಿನಕೆರೆ ಸರ್ಕಾರಿ ಶಾಲೆಗೆ ₹ 2.50 ಲಕ್ಷ ವೆಚ್ಚವನ್ನು ಪೀಠೋಪಕರಣಗಳ ಖರೀದಿಗೆ ನೀಡಲಾಗಿದೆ. ಡಯಾಲಿಸಿಸ್ ಯಂತ್ರಕ್ಕೆ ₹ 11 ಲಕ್ಷ ಖರ್ಚು ಮಾಡಲಾಗಿದೆ. ಗಾಜನೂರು ಹೊಸಳ್ಳಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ₹ 5 ಲಕ್ಷ ನೀಡಲಾಗಿದೆ. ಅಂಗವಿಕಲರಿಗೆ 9 ತ್ರಿಚಕ್ರ ವಾಹನ ಖರೀದಿಗಾಗಿ ತಲಾ ₹ 1 ಲಕ್ಷದಂತೆ ಒಟ್ಟು ₹ 9 ಲಕ್ಷ ಖರ್ಚು ಮಾಡಲಾಗಿದೆ. ಮಾಳೂರು ಪದವಿಪೂರ್ವ ಕಾಲೇಜು ಅಭಿವೃದ್ಧಿಗೆ ₹ 5 ಲಕ್ಷ ಹಾಗೂ ಇನ್ನಿತರ ಮೂಲಸೌಕರ್ಯ ಅಭಿವೃದ್ದಿಗೆ ಅನುದಾನ ನೀಡಲಾಗಿದೆ. ಸ್ಥಗಿತಗೊಂಡ ವಿವಿಧ ಕಾಮಗಾರಿಗಳಿಗೆ ಹಣ ನೀಡುವ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನವನ್ನು ಬಳಸಲಾಗಿದೆ. ಜನರಿಂದ ಹೆಚ್ಚು ಬೇಡಿಕೆಗಳಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಕಾಮಗಾರಿಗಳತ್ತ ಗಮನ ಹರಿಸಲಾಗುವುದು.

–ಆರಗ ಜ್ಞಾನೇಂದ್ರ, ಗೃಹ ಸಚಿವರು ಹಾಗೂ ಶಾಸಕರು, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.