ADVERTISEMENT

ಪಟ್ಟಣ ಪಂಚಾಯಿತಿ ಚುನಾವಣೆ: ಭಿನ್ನಮತಕ್ಕೆ ದಾರಿ ಮಾಡಿಕೊಟ್ಟ ಅಭ್ಯರ್ಥಿಗಳ ಆಯ್ಕೆ

ತೀರ್ಥಹಳ್ಳಿ

ಶಿವಾನಂದ ಕರ್ಕಿ
Published 16 ಏಪ್ರಿಲ್ 2021, 3:49 IST
Last Updated 16 ಏಪ್ರಿಲ್ 2021, 3:49 IST
   

ತೀರ್ಥಹಳ್ಳಿ: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಕೆ ಕಾರ್ಯ ಏ. 15 ಕೊನೆಕ್ಕೆ ಕೊನೆಗೊಂಡಿದ್ದು, ಚುನಾವಣಾ ಕಾವು ನಿಧಾನಕ್ಕೆ ಏರುತ್ತಿದೆ. ಪಟ್ಟಣದ ಬೀದಿ ಬೀದಿಗಳಲ್ಲಿ ಅಭ್ಯರ್ಥಿಗಳ ಜತೆ ಮುಖಂಡರು ಹೆಜ್ಜೆ ಹಾಕುತ್ತಾ ಮತ ಬೇಟೆ ಆರಂಭಿಸಿದ್ದಾರೆ.

ರಾಜ್ಯ ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಈಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಬಿಜೆಪಿ– ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಗೆ ದಾರಿ ಸುಗಮಗೊಳಿಸಿದೆ. ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಗೊಂದಲ ಬಿಜೆಪಿ, ಕಾಂಗ್ರೆಸ್‌ನಲ್ಲಿ ತೀವ್ರ ಭಿನ್ನಮತಕ್ಕೆ ಕಾರಣವಾಗಿದ್ದು, ಅಭ್ಯರ್ಥಿಗಳಾಗುವ ಕನಸು ಕಂಡ ಹಲವರ ಮುನಿಸು ಇಮ್ಮಡಿಯಾಗಿದೆ. ಭಿನ್ನಮತ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಸಂದೇಹ ವ್ಯಕ್ತವಾಗುತ್ತಿದೆ.

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಎರಡು ಬಾರಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಹಮತ್ ಉಲ್ಲಾ ಅಸಾದಿ ಈ ಬಾರಿ 15ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರ ನಿಕಟವರ್ತಿಯಾಗಿದ್ದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಪೂಜಾರಿ ಅವರಿಗೆ ಟಿಕೆಟ್ ಕೈತಪ್ಪಿದೆ. ಕಾಂಗ್ರೆಸ್, ಬಿಜೆಪಿಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದ ಆಕಾಂಕ್ಷಿಗಳ ದಂಡು ಈಗ ಭಿನ್ನಮತದ ಹಾದಿ ಹಿಡಿಯುವ ಹಂತ ತಲುಪಿದ್ದು, ಮುಖಂಡರಿಗೆ ದೊಡ್ಡ ತಲೆನೋವು ತಂದಿದೆ.

ADVERTISEMENT

ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದವರೆಗೂ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ತೀವ್ರ ಕಸರತ್ತು ನಡೆದಿದೆ. ಮಂಜುನಾಥಗೌಡ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಬಿ.ಆರ್.ರಾಘವೇಂದ್ರಶೆಟ್ಟಿ, ರತ್ನಾಕರಶೆಟ್ಟಿ, ಹರೀಶ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಿಮ್ಮನೆ ರತ್ನಾಕರ ಅವರು ಸಮ್ಮತಿಸಿದ್ದಾರೆ. ಆದರೆ, ಮಂಜುನಾಥಗೌಡ ಹಾಗೂ ಕಿಮ್ಮನೆ ರತ್ನಾಕರ ನಡುವೆ ಮುಖಾಮುಖಿ ಚರ್ಚೆ ನಡೆದಿಲ್ಲ. ಪಕ್ಷದಲ್ಲಿ ಈ ಇಬ್ಬರೂ ನಾಯಕರ ಬೆಂಬಲಿಗರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಲಾಭ ಬಿಜೆಪಿಗೆ ವರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಪಕ್ಷದೊಳಗಿನ ಒಳಜಗಳ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.

ಪಟ್ಟಣ ಪಂಚಾಯಿತಿಯ ಆಡಳಿತವನ್ನು ಸತತ 2 ಬಾರಿ ಹಿಡಿದಿದ್ದ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಸರಾಗವಾಗಿ ನಡೆದಿಲ್ಲ. ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಮುಖಂಡರು ಹತ್ತಾರು ಬಾರಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡುವಂತಾಗಿದೆ. ಬಿಜೆಪಿಯಲ್ಲಿ ಚುನಾವಣೆ ಎದುರಿಸಲು ಹಿಂದಿನ ಒಗ್ಗಟ್ಟು ಇದ್ದಂತೆ ಕಂಡು ಬರುತ್ತಿಲ್ಲ. ವಾರ್ಡ್‌ವಾರು ಉಸ್ತುವಾರಿ ಮುಖಂಡರನ್ನು ನೇಮಿಸಲಾಗಿದ್ದು, ಕೆಲವರು ಕಾಂಗ್ರೆಸ್ ಮಿತ್ರರ ಜತೆ ಒಳ ಒಪ್ಪಂದದಲ್ಲಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

ಟಿಕೆಟ್ ಹಂಚಿಕೆಗೂ ಮುನ್ನ ಆಣೆ ಪ್ರಮಾಣ!

ಪಕ್ಷಕ್ಕೆ ದ್ರೋಹ ಬಗೆಯದಂತೆ ಟಿಕೆಟ್ ಹಂಚಿಕೆಗೂ ಮುನ್ನ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿಕೊಂಡ ಪ್ರಸಂಗ ನಡೆದಿದೆ. ಚುನಾವಣೆಯಲ್ಲಿ ಗೆದ್ದ ನಂತರ ಆಪರೇಷನ್ ಕಮಲಕ್ಕೆ ಒಳಗಾಗಬಾರದು, ಪಕ್ಷಕ್ಕೆ ದ್ರೋಹ ಬಗೆಯಬಾರದು ಎಂಬ ತಾಕೀತು ನೀಡಿ ‘ಬಿ’ ಫಾರಂ ಹಂಚಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.