
ತೀರ್ಥಹಳ್ಳಿ: ದೇಶದಲ್ಲಿ ಆರ್ಥಿಕ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ದೊರೆತ ನಂತರ ಬಡತನ ರೇಖೆ ಒಳಗಿದ್ದ ಕುಟುಂಬಗಳ ಸಂಖ್ಯೆ ಕಡಿಮೆ ಆಗಿದೆ. ಅಸಹಾಯಕರಿಗೆ ಸಹಕಾರ ಸಂಸ್ಥೆಗಳು ಧ್ವನಿ ಆಗಿ ಕೆಲಸ ಮಾಡುತ್ತಿವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಗುರುವಾರ ಕಡಿದಾಳು ಮಂಜಪ್ಪ ಸಭಾ ಭವನದಲ್ಲಿ ನಡೆದ ಹಾರೋಗೊಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ, ನೂತನ ಕಟ್ಟಡ ಶಂಕುಸ್ಥಾಪನೆ, ಸಾರ್ಥಕ ಸಹಕಾರ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಜನ ಸಹಕಾರ ಕ್ಷೇತ್ರದ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಬೆಂಬಲಿಸುವುದು ಅವಶ್ಯಕವಾಗಿದೆ. ಭಾರತದಲ್ಲಿ ಬಡತನ ಮರೆ ಆಗಿ ಜನರಿಗೆ ಆರ್ಥಿಕ ಶಕ್ತಿ ದೊರೆಯುತ್ತಿದೆ. ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಯಲ್ಲಿ ಸಹಕಾರ ಸಂಸ್ಥೆಗಳು ಕ್ರಾಂತಿ ಮಾಡಿವೆ ಎಂದರು.
ಸಹಕಾರ ಸಂಸ್ಥೆಗಳ ವಹಿವಾಟು ಬಲಿಷ್ಟಗೊಂಡು ಸಾಕಷ್ಟು ಬದಲಾವಣೆ ಆಗಿದೆ. ಸಾಲ ವಸೂಲಾತಿಯಲ್ಲಿನ ದೌರ್ಜನ್ಯಕ್ಕೆ ಸಹಕಾರ ಸಂಸ್ಥೆಗಳು ತಕ್ಕ ಉತ್ತರ ನೀಡಿವೆ. ಹಸಿವಿನಿಂದ ಜನರನ್ನು ಪಾರು ಮಾಡುವಲ್ಲಿ ಸಹಕಾರ ಕ್ಷೇತ್ರದ ಪ್ರಭಾವ ಇದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಸಹಕಾರ ತತ್ವದಲ್ಲಿ ಸಂಘ ಕಟ್ಟುವುದಕ್ಕೆ ಮಹಾತ್ಮಗಾಂಧೀಜಿ ಬುನಾದಿ ಹಾಕಿದ್ದರು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸಹಕಾರ ಸಂಸ್ಥೆಗಳು ಕಷ್ಟದಲ್ಲಿದ್ದು, ನಬಾರ್ಡ್ ನಿಯಮಗಳು ಹೊರೆ ಆಗಿವೆ. ಬಡ್ಡಿದರ ಸಹಕಾರ ಸಂಸ್ಥೆಗಳಿಗೆ ಉಪಯುಕ್ತವಾಗಿಲ್ಲ. ಸ್ವಂತ ಬಂಡವಾಳದ ಸಂಪನ್ಮೂಲದಿಂದ ಸಹಕಾರ ಸಂಸ್ಥೆಗಳು ಬೆಳೆಯಬೇಕು. ವಾಣಿಜ್ಯ ಬ್ಯಾಂಕ್ ಜತೆ ಸಹಕಾರ ಸಂಸ್ಥೆಗಳು ಸಮರ್ಥವಾಗಿ ಸ್ಪರ್ಧೆ ನಡೆಸುತ್ತಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
‘ಹಾರೋಗೊಳಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು 50 ವರ್ಷಗಳ ಹಿಂದೆ ಬಹಳ ಕಷ್ಟಪಟ್ಟು ಸ್ಥಾಪಿಸಲಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎಚ್. ರಂಗನಾಥ್ ಅವರ ಬಳಿ ವಿಶೇಷ ಮನವಿ ಸಲ್ಲಿಸಿ ಸಂಘ ಸ್ಥಾಪನೆಗೆ ಅವಕಾಶ ಪಡೆಯಲಾಗಿತ್ತು. ಸಂಘ ಇಂದು ಎತ್ತರಕ್ಕೆ ಬೆಳೆದಿದ್ದು ಸಾವಿರಾರು ಜನರಿಗೆ ಅನುಕೂಲವಾಗಿದೆ’ ಮಾಜಿ ಶಾಸಕ ಕಡಿದಾಳ್ ದಿವಾಕರ್ ಹೇಳಿದರು.
ಸಾರ್ಥಕ ಸಹಕಾರ ಸ್ಮರಣ ಸಂಚಿಕೆ ಗೌರವಾಧ್ಯಕ್ಷ ಕಡಿದಾಳು ಪ್ರಕಾಶ್ ಪ್ರಸ್ತಾವಿಸಿದರು.
ಹಾರೋಗೊಳಿಗೆ ಸಂಘದ ಅಧ್ಯಕ್ಷ ತುಂಬೇಕೊಡಿಗೆ ರತ್ನಾಕರ್, ಮಾಜಿ ಶಾಸಕ ಕಡಿದಾಳು ದಿವಾಕರ್, ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ಹಾರೋಗೊಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಮೋಹನೇಶ್ ಇದ್ದರು.
ಉಷಾ ಎಸ್. ಪ್ರಾರ್ಥಿಸಿದರು. ತೋರಳಿ ಪ್ರಸನ್ನ ಸ್ವಾಗತಿಸಿದರು. ಸ್ಮರಣ ಸಂಚಿಕೆ ಸಂಪಾದಕ ನೆಂಪೆ ದೇವರಾಜ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.