ತೀರ್ಥಹಳ್ಳಿ: ಹಗಲು ಸೀಳಿ ಕಾರ್ಮೋಡ ಇಳೆಗೆ ಇಳಿಯುವ ಹೊತ್ತು. ಕಾರ್ಗಾಲದ ತವಕದಲ್ಲಿ ವನಧಾತ್ರಿ. ಜೀವ ಸಂಕುಲಕ್ಕೆ ವರ್ಷ ವೈಭವದ ಹರ್ಷ. ಕೊನೆಗಾಲದ ನಿರೀಕ್ಷೆಯಲ್ಲಿದ್ದ ಝರಿಗಳಿಗೆ ಭೋರ್ಗರೆಯುವ ಅದೃಷ್ಟ. ಕೆಸರು ಮಣ್ಣಿನ ಆಳಕ್ಕಿಳಿದು ಉಸಿರುಗಟ್ಟಿದ ಜಲಚರಗಳಿಗೆ ಜೀವಕಳೆ…
–ಇದು ಮಲೆನಾಡಿನ ದೃಶ್ಯಕಾವ್ಯ.
ಮಲೆನಾಡು ಈಗ ಸಂಭ್ರಮದ ಕ್ಷಣದಲ್ಲಿದೆ. ಭೂರಮೆ ಹದಗೊಂಡು ಮೈಮನಗಳಿಗೆ ಮುದ ನೀಡುತ್ತಿದೆ. ನೀರು ಹಬೆಯಾಗಿ ಮೋಡ ಸೇರುವ ಕ್ಷಣದಿಂದಾಗಿ ಒಣಗುತ್ತಿದ್ದ ಘಟ್ಟಸಾಲು ಟಿಸಿಲೊಡೆದು ಹಸಿರೆಲೆ ನಳನಳಿಸುತ್ತಿದೆ.
ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ ಮಳೆ ನಕ್ಷತ್ರಗಳು ಹೊತ್ತು ತಂದ ನೀರಿನಿಂದ ಎಲ್ಲೆಲ್ಲೂ ಹರಿಯುವ ಝರಿಗಳ ನಿನಾದ ಕಿವಿಗಳಿಗೆ ಇಂಪು ನೀಡುತ್ತಿದೆ. ಕಾಡು, ಬೆಟ್ಟ, ಗುಡ್ಡಗಳ ಸಾಲಿನಿಂದ ಇಳಿಯುವ ಹನಿಗಳು ಒಂದಕ್ಕೊಂದು ಸಂಧಿಸಿ ತೊರೆಯಾಗಿ ಹರಿಯುತ್ತಿವೆ. ಹೀಗೆ ಸೇರಿದ ತೊರೆಗಳು ಮಲೆನಾಡಿನಾದ್ಯಂತ ನೈಸರ್ಗಿಕ ಝರಿಗಳನ್ನೇ ಸೃಷ್ಟಿಸಿವೆ.
ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 22 ಕಿ.ಮೀ. ದೂರದಲ್ಲಿರುವ ಬೀಸು ಗ್ರಾಮದ ಡೊಂಬರಗುಡ್ಡ ಇಂತಹ ಅವಿಸ್ಮರಣೀಯ ಋತುವನ್ನು ರಮಣೀಯಗೊಳಿಸುತ್ತಿದೆ. ಗುಡ್ಡದ ಕಾಲಡಿಯಲ್ಲಿರುವ ಆನೆ ಮೆಟ್ಟಿಲು ಕಲ್ಲಿನ ಏರಿ, ಆನೆಕಲ್ ಚಟೇರಿ ಜಲಪಾತ ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿವೆ. ಸಮೀಪದಲ್ಲೇ ಇರುವ ನೆಕ್ರಕೋಡ್, ಅಂಬುತೀರ್ಥ, ಅಚ್ಚಕನ್ಯೆ ಜಲಪಾತ, ಹೊಸನಗರ ತಾಲ್ಲೂಕಿನ ಇಟಕಿ, ಬಜೆಕುಂಬ್ರಿ, ಹಿಲ್‌ಕುಂಜಿ ಜಲಪಾತ ಮಳೆಗಾಲದ ಸೌಂದರ್ಯ ಕಾಶಿಯಂತೆ ತೋರುತ್ತಿವೆ.
ಬೀಸು ಗ್ರಾಮದಿಂದ ಒಂದು ಕಿ.ಮೀ. ಕಾಡ ಹಾದಿಯಲ್ಲಿ ಕ್ರಮಿಸಿದರೆ ಸುಂದರವಾದ ಆನೆಕಲ್ ಚಟೇರಿ ಕಾಣಿಸಿಕೊಳ್ಳುತ್ತದೆ. ನೀರಿನ ಹರಿವನ್ನು ಹಿಂಬಾಲಿಸಿದರೆ ಜಾರು ಬಂಡೆಯ ಮೇಲೆ ಹರಿಯುವ ಜಲಪಾತಗಳ ಸಾಲು ನೋಡಬಹುದಾಗಿದೆ. ಸುತ್ತಲೂ ಪಶ್ಚಿಮಘಟ್ಟ ಸಾಲಿನ ರಮಣೀಯ ಹಸಿರು ಹೊದಿಕೆಯ ಬೆಟ್ಟಗಳು ಕಣ್ಣಿಗೆ ಆಹ್ಲಾದ ನೀಡುತ್ತವೆ. ಮೋಡಗಳ ಮರೆಯಿಂದ ಮಂಜು ಗುಡ್ಡಗಳನ್ನೇ ಎತ್ತಿಕೊಂಡು ಪ್ರಯಾಣ ಬೆಳೆಸಿದಂತೆ ಭಾಸವಾಗುತ್ತದೆ. ಕಾಡ ಹಾದಿಯಲ್ಲಿ ಸಾಗಿದಂತೆಲ್ಲ ಒಂದರ ನಂತರ ಮತ್ತೊಂದು ಝರಿಗಳ ನಾದ ಕಿವಿಗೆ ನಾಟುವಂತಿದೆ.
ಆರಗ, ಕಡೇಗದ್ದೆ, ಬೀಸು ಗ್ರಾಮದ ಹಾದಿಯಲ್ಲಿ ಇಂತಹ ಸಣ್ಣ ಝರಿ, ಜಲಪಾತಗಳ ಸಾಲು ಸಾಕಷ್ಟಿವೆ. ಹಾಸು ಬಂಡೆಯ ಮೇಲಿನಿಂದ ಇಳಿಯುವ ನೀರು ನಯನ ಮನೋಹರವಾಗಿದ್ದರೆ, ಶರಾವತಿ ಹಿನ್ನೀರು ಪ್ರದೇಶ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಾಡುಕೋಣಗಳ ಹಿಂಡು ಆಗಾಗ ಅರಣ್ಯದೊಳಗಿಂದ ಇಣುಕಿ ನೋಡುವ ಪರಿಗೆ ಬೆಚ್ಚುವ ಸನ್ನಿವೇಶಗಳು ಇವೆ. ಗುಂಪಾಗಿ ಹೋಗಿ ಜಲಪಾತ ವೀಕ್ಷಿಸುವುದು ಹೆಚ್ಚು ಹಿತಕರ.
ಮಳೆಗೆ ಗುಡ್ಡಬೆಟ್ಟಗಳ ಸಾಲಿನಿಂದ ಇಳಿಯುವ ಜಲಪಾತ ಸುಂದರವಾಗಿ ಕಾಣಿಸುತ್ತಿವೆ. ಬಂಡೆಗಳು ಪಾಚಿಕಟ್ಟಿದ್ದು ಪ್ರವಾಸಿಗರು ಎಚ್ಚರಿಕೆಯಿಂದ ವೀಕ್ಷಣೆ ಮಾಡಬಹುದು– ಕಿರಣ್, ಬೀಸು ಗ್ರಾಮಸ್ಥ
ಕೊಂಬೆತ್ತಿ ಕಚ್ಚುವ ‘ಕಾರೇಡಿ’
ಕೆಸರಿನಲ್ಲಿ ಹುದುಗಿ ಜೀವ ಉಳಿಸಿಕೊಂಡಿದ್ದ ಕಾರೇಡಿಗಳು ಈಗ ಸಾಲಾಗಿ ಸವಾರಿ ನಡೆಸುತ್ತಿವೆ. ಗುಂಡಿಗಳಲ್ಲಿ ಸೇರಿ ವಿರಹ ವೇದನೆ ಅನುಭವಿಸುತ್ತಿರುವ ಅವು ಪರಜೀವಿಗಳನ್ನು ಕಂಡೊಡನೆ ಕೊಂಬೆತ್ತಿ ಕಚ್ಚಲು ಮುಂದಾಗುತ್ತವೆ. ಕೊಂಚ ನಾಜೂಕಿನ ಏಡಿಗಳು ಬಿಲ ಸೇರಿ ಜೀವ ಉಳಿಸಿಕೊಳ್ಳುತ್ತವೆ. ಮಲೆನಾಡಿನಲ್ಲಿ ಕಾರೇಡಿಗಳ ಕುರಿತು ಭಯಾನಕ ಕಥೆಗಳಿವೆ. ಈ ಏಡಿಗಳು ತಮ್ಮ ಕೊಂಬಿನಿಂದ ಗಟ್ಟಿಯಾಗಿ ಹಿಡಿದು ಬೆರಳನ್ನೇ ತುಂಡರಿಸಬಲ್ಲವು. ಆದರೂ ಕಿಲಾಡಿಗಳು ಅವುಗಳ ಕೊಂಬು ಮುರಿದು ಸುಟ್ಟು ತಿನ್ನುವುದುಂಟು. ಅವುಗಳ ರುಚಿ ಅನುಭವಿಸಿದವರಿಗೇ ಗೊತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.