ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಸೀಗೆಬಾಗಿ ಬಳಿ ಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಕೆ.ಕೆ.ಜ್ಯೋತಿ ಅವರಿಗೆ ಶಾಸಕರ ಪುತ್ರ ಎಂದು ಹೇಳಿಕೊಂಡ ವ್ಯಕ್ತಿ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೂವರನ್ನು ಬಂಧಿಸಲಾಗಿದೆ.
ಭದ್ರಾವತಿಯ ಹಳೇನಗರ ಠಾಣೆಯಲ್ಲಿ ಮಂಗಳವಾರ ಅಧಿಕಾರಿ ಕೆ.ಕೆ. ಜ್ಯೋತಿ ನೀಡಿದ ದೂರು ಆಧರಿಸಿ ಅಲ್ಲಿನ ಪೊಲೀಸರು ಕ್ರಮ ಕೈಗೊಂಡಿದ್ದು, ವಿಡಿಯೊ ಸಾಕ್ಷ್ಯ ಆಧರಿಸಿ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆಯ ರವಿ ಬಿನ್ ಮಲ್ಲೇಶಪ್ಪ (30), ಹಾಸನ ಜಿಲ್ಲೆ ಅರಕಲಗೂಡಿನ ವರುಣ್ ಬಿನ್ ರಾಜಶೇಖರ್ (34) ಹಾಗೂ ಭದ್ರಾವತಿ ತಾಲ್ಲೂಕಿನ ಸುರೇಂದ್ರಗೌಡ ಕ್ಯಾಂಪ್‌ನ ಅಜಯ್ ಬಿನ್ ತಿಪ್ಪೇಶ್ (28) ಎಂಬುವವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದರು.
ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಅಧಿಕಾರಿ ಜ್ಯೋತಿ ಯಾವುದೇ ವ್ಯಕ್ತಿಯ ಹೆಸರು ನಮೂದಿಸಿಲ್ಲ ಎಂದು ತಿಳಿದುಬಂದಿದೆ.
ಜಾತಿ ನಿಂದನೆ ಪ್ರಕರಣಕ್ಕೆ ಯತ್ನ:
ಅಧಿಕಾರಿ ಕೆ.ಕೆ. ಜ್ಯೋತಿ ವಿರುದ್ಧ ಭದ್ರಾವತಿಯ ಹಳೇನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಲು ಅಕ್ರಮ ಮರಳು ಸಾಗಣೆ ದಂಧೆಕೋರರು ಮುಂದಾಗಿದ್ದರು ಎಂಬುದು ತಿಳಿದುಬಂದಿದೆ.
ಜ್ಯೋತಿ ಅವರಿಗೆ ಸೋಮವಾರ ಠಾಣೆಯಿಂದ ಕರೆ ಮಾಡಿದ್ದ ಪೊಲೀಸರು, ‘ನಿಮ್ಮ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಕೆಲವರು ಬಂದಿದ್ದಾರೆ. ಠಾಣೆಗೆ ಬನ್ನಿ’ ಎಂದು ಕರೆದಿದ್ದರು. ‘ನಾನು ರಾತ್ರಿ ರೇಡ್‌ಗೆ ಹೋಗಿದ್ದೆ. ಅಲ್ಲಿ ಯಾರಿಗೂ ಬೈದಿಲ್ಲ. ಜಾತಿ ನಿಂದನೆ ಪ್ರಕರಣಕ್ಕೆ ಸಾಕ್ಷ್ಯ ಬೇಕಲ್ಲವೇ?’ ಎಂದು ಜ್ಯೋತಿ ಪ್ರಶ್ನಿಸಿದ್ದಾರೆ. ಅದಕ್ಕೆ ಅಧಿಕಾರಿ ಸುಮ್ಮನಾಗಿದ್ದಾರೆ.
‘ಜ್ಯೋತಿ ಅವರು ಅಧಿಕಾರಿ ಎಂಬುದು ಹಳೇನಗರ ಠಾಣೆ ಪಿಎಸ್‌ಐಗೆ ಗೊತ್ತಿರಲಿಲ್ಲ. ಹೀಗಾಗಿ ಕರೆ ಮಾಡಿದ್ದಾರೆ. ಅದು ಗೊತ್ತಾದ ಮೇಲೆ ದೂರು ಕೊಡಲು ಬಂದವರನ್ನು ವಾಪಸ್ ಕಳುಹಿಸಿದ್ದಾರೆ’ ಎಂದು ಮಿಥುನ್‌ಕುಮಾರ್ ಪ್ರತಿಕ್ರಿಯಿಸಿದರು.
ಪ್ರಕರಣದ ತನಿಖೆಗೆ ಭದ್ರಾವತಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ವಿಡಿಯೊ ಸಾಕ್ಷ್ಯವನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸುವುದು ಸೇರಿದಂತೆ ತಾಂತ್ರಿಕ ಆಯಾಮದಿಂದಲೂ ತನಿಖೆ ಕೈಗೊಳ್ಳಲಾಗುವುದು.ಜಿ.ಕೆ.ಮಿಥುನ್‌ಕುಮಾರ್ ಶಿವಮೊಗ್ಗ ಎಸ್ಪಿ
ಭದ್ರಾವತಿಯಲ್ಲಿ ಅರಾಜಕತೆ ಇದ್ದು ಗೃಹ ಸಚಿವ ಜಿ.ಪರಮೇಶ್ವರ ಭೇಟಿ ಕೊಡಬೇಕು. ಅಲ್ಲಿನ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು. ಡಿವೈಎಸ್ಪಿ ಅಮಾನತು ಮಾಡಬೇಕುಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ನಗರ ಬಿಜೆಪಿ ಶಾಸಕ
ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೊ
ಅಕ್ರಮ ಮರಳು ದಂಧೆ ತಡೆಯಲು ಯತ್ನಿಸಿದ ಇನ್ನೊಂದು ಪ್ರಕರಣದಲ್ಲಿ ಅದೇ ಅಧಿಕಾರಿಗೆ ಶಾಸಕರ ಪುತ್ರ ಎಂದು ಹೇಳಿಕೊಂಡ ವ್ಯಕ್ತಿ ಬೆದರಿಕೆ ಹಾಕುವ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾತ್ರಿ ಮಹಿಳಾ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ಅಲ್ಲಿ ವ್ಯಕ್ತಿಯೊಬ್ಬ ‘ಮೇಡಂ ಅಣ್ಣಾ ಮಾತಾಡುತ್ತಾರೆ ತಗೊಳ್ರಿ’ ಎಂದು ಫೋನ್ ಕೊಡುತ್ತಾನೆ. ‘ಯಾವ ಅಣ್ಣಾ’ ಎಂದು ಅಧಿಕಾರಿ ಕೇಳಿದಾಗ ‘ಎಂಎಲ್‌ಎ ಅವರ ಮಗ’ ಅನ್ನುತ್ತಾನೆ. ಅತ್ತಲಿಂದ ಮಾತಾಡುವ ವ್ಯಕ್ತಿ ‘ನೀವು ಅಲ್ಲಿ ಬಂದು ಡಕಾಯಿತಿ ಮಾಡುತ್ತೀರಾ?’ ಎಂದು ಪ್ರಶ್ನಿಸಿದಾಗ ‘ಇಲ್ಲಿ ರೇಡ್‌ಗೆ (ದಾಳಿ) ಬಂದಿದ್ದೇವೆ’ ಎಂದು ಅಧಿಕಾರಿ ಉತ್ತರಿಸುತ್ತಾರೆ. ‘ನಿನಗೆ ತಾಕತ್ ಇದ್ದರೆ ಅಲ್ಲಿಯೇ ನಿಂತುಕೊಳ್ಳಬೇಕು. ನಮ್ ಹುಡುಗರನ್ನು ಕಳಿಸುತ್ತೇನೆ’ ಎಂದು ಬೆದರಿಕೆ ಧಾಟಿಯಲ್ಲಿ ಹೇಳುವ ವ್ಯಕ್ತಿ ನಂತರ ಅವಾಚ್ಯ ಪದಗಳಿಂದ ಅಧಿಕಾರಿಗೆ ನಿಂದಿಸುತ್ತಾನೆ. ‘ಗಾಡಿ (ಟ್ರ್ಯಾಕ್ಟರ್) ನಮ್ಮ ಮೈಮೇಲೆ ಹೊಡೀರಿ ಅನ್ನುತ್ತೀರಲ್ಲ. ಬೆದರಿಸುವುದೇಕೆ? ಅದನ್ನು ನಾವು ರೆಕಾರ್ಡ್ ಮಾಡಿಕೊಂಡಿದ್ದೇವೆ’ ಎಂದು ಫೋನ್ ತಂದುಕೊಟ್ಟ ವ್ಯಕ್ತಿಗೆ ಮಹಿಳಾ ಅಧಿಕಾರಿ ಹೇಳುವುದು ವಿಡಿಯೊದಲ್ಲಿದೆ. ಸೋಮವಾರ ಹರಿದಾಡಿದ್ದ ವಿಡಿಯೊದ ಮುಂದುವರಿದ ಭಾಗ ಈ ವಿಡಿಯೊದಲ್ಲಿದೆ ಎಂದು ಗೊತ್ತಾಗಿದೆ. ಬಿಜೆಪಿಯಿಂದ ಪ್ರತಿಭಟನೆ: ಮಹಿಳಾ ಅಧಿಕಾರಿಗೆ ನಿಂದನೆ ಖಂಡಿಸಿ ಭದ್ರಾವತಿಯಲ್ಲಿ ಮಂಗಳವಾರ ಬಿಜೆಪಿ ಹಾಗೂ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.