ADVERTISEMENT

ರೈತರ ಮಾಲ್‌ ನಿರ್ಮಾಣಕ್ಕೆ ₹ 10 ಕೋಟಿಗೆ ಬೇಡಿಕೆ

ಶಿಕಾರಿಪುರ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಮಾರಾಟ ಸಂಘದ ಪೆಟ್ರೋಲ್‌ ಬಂಕ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 5:13 IST
Last Updated 1 ಮಾರ್ಚ್ 2021, 5:13 IST
ಶಿಕಾರಿಪುರದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಮಾರಾಟ ಸಂಘದ (ಟಿಎಪಿಸಿಎಂಎಸ್) ಫ್ಯುಯಲ್ ಸ್ಟೇಷನ್ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಆಡಳಿತ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿದರು.
ಶಿಕಾರಿಪುರದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಮಾರಾಟ ಸಂಘದ (ಟಿಎಪಿಸಿಎಂಎಸ್) ಫ್ಯುಯಲ್ ಸ್ಟೇಷನ್ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಆಡಳಿತ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿದರು.   

ಶಿಕಾರಿಪುರ: ‘ರೈತರ ಮಾಲ್ ಆರಂಭಿಸಲು ₹ 10 ಕೋಟಿ ಅನುದಾನ ನೀಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಎಂ.ಬಿ. ಚನ್ನವೀರಪ್ಪ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಪಟ್ಟಣದ ಸಾಲೂರು ರಸ್ತೆಯಲ್ಲಿ ಭಾನುವಾರ ನಡೆದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಮಾರಾಟ ಸಂಘದ (ಟಿಎಪಿಸಿಎಂಎಸ್) ಫ್ಯುಯಲ್ ಸ್ಟೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1949ರಲ್ಲಿ ಈ ಸಹಕಾರ ಸಂಘ ಆರಂಭವಾಗಿದ್ದು, ಮುಂದಿನ ವರ್ಷ 75 ವರ್ಷಗಳನ್ನು ಪೂರೈಸಲಿದೆ. ರೈತರಿಗೆ ಅಗತ್ಯ ಸಮಯಕ್ಕೆ ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ಒದಗಿಸುತ್ತಿದೆ. ಕೆಲವು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಸಂಘ ಪ್ರಸ್ತುತ ಲಾಭದಲ್ಲಿದೆ. ಪ್ರಸ್ತುತ ರೈತರಿಗಾಗಿ ಪೆಟ್ರೋಲ್ ಬಂಕ್ ಆರಂಭಿಸಿದ್ದೇವೆ. ಈಗರೈತರ ಮಾಲ್ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಫ್ಯುಯಲ್ ಸ್ಟೇಷನ್ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಸ್ವಚ್ಛ ಆಡಳಿತ ನಡೆಸಿದಾಗ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿಯಾಗುತ್ತವೆ’ ಎಂದು ಹೇಳಿದರು.

‘ರೈತರ ಸ್ವಾಭಿಮಾನದ ಸಂಸ್ಥೆಯಾದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಮಾರಾಟ ಸಂಘ ರಾಜ್ಯಕ್ಕೆ ಮಾದರಿಯಾಗುವಂತೆ ಆಡಳಿತ ನಡೆಸಬೇಕು. ರೈತರ ಸಂಸ್ಥೆಗೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಬೇಕು. ಪೆಟ್ರೋಲ್ ಬಂಕ್ ಅನ್ನು ಲಾಭದ ದಿಕ್ಕಿನಲ್ಲಿ ಕೊಂಡೊಯ್ಯಲು ರೈತರು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

‘ರೈತರ ಈ ಸಹಕಾರ ಸಂಘ ಶಕ್ತಿಶಾಲಿಯಾಗಿ ಬೆಳೆಯಲು ಅಗತ್ಯ ಸಹಕಾರವನ್ನು ನೀಡುತ್ತೇವೆ. ಅನೇಕ ಹಿರಿಯರ ಪರಿಶ್ರಮದಿಂದ ಬೆಳೆದ ಈ ಸಂಸ್ಥೆಯನ್ನು ಎತ್ತರದ ಮಟ್ಟಕ್ಕೆ ಕೊಂಡೊಯ್ಯಲು ನೂತನ ಪದಾಧಿಕಾರಿಗಳು ಶ್ರಮಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಟಿಎಪಿಸಿಎಂಎಸ್ ಅಧ್ಯಕ್ಷ ಚುರ್ಚಿಗುಂಡಿ ಶಶಿಧರ್, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಮಾರ್ಗದರ್ಶನದಲ್ಲಿ ಸಹಕಾರ ಸಂಘ ನಡೆಸುತ್ತಿದ್ದೇವೆ. ರೈತರಿಗೆ ಅಗತ್ಯವಾದ ಎಲ್ಲ ಕೃಷಿ ಪರಿಕರಗಳನ್ನು ಒದಗಿಸಲು ಕೃಷಿ ಮಾಲ್ ನಿರ್ಮಾಣ ಮಾಡುವ ಉದ್ದೇಶವಿದೆ’ ಎಂದರು.

ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಕಿರಣ್ ಕುಮಾರ್ ಹರ್ತಿ ರೈತರಿಗೆ ಕೃಷಿ ಚಟುವಟಿಕೆ ಕುರಿತು ಉಪನ್ಯಾಸನೀಡಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ರಾಜ್ಯ ಎಪಿಎಂಸಿ ಉಪಾಧ್ಯಕ್ಷ ಚುರ್ಚಿಗುಂಡಿ ರುದ್ರಮುನಿ, ವಿವಿಧ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಭದ್ರಾಪುರ ಹಾಲಪ್ಪ, ಕಬಾಡಿ ರಾಜಣ್ಣ, ತೊಗರ್ಸಿ ಸಣ್ಣ ಹನುಮಂತಪ್ಪ, ಅಗಡಿ ಅಶೋಕ್, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್ ನಾಯ್ಕ, ಶಿವಮೊಗ್ಗ ಬಿಪಿಸಿಎಲ್ ಮಾರಾಟ ವ್ಯವಸ್ಥಾಪಕ ಸಾಗರ್ ಜೆ. ತೊಂಡಕರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಕೆ.ಯು. ಗಂಗಾಧರ್, ನಿರ್ದೇಶಕರಾದ ಎಸ್.ಎಸ್. ರಾಘವೇಂದ್ರ, ಹಳ್ಳೂರು ಪರಮೇಶ್ವರಪ್ಪ, ಸುನಿತಾ, ಎ.ಬಿ. ಸುಧೀರ್, ಸುರೇಶ್ ಗೌಡ್ರು, ಜಯನಾಯ್ಕ, ಚುರ್ಚಿಗುಂಡಿ ಪ್ರೇಮಾ ಸುರೇಶ್, ಬಿ. ಅನೂಪ್, ಚನ್ನಪ್ಪ, ಬಸವಣ್ಯಪ್ಪ, ಕಾರ್ಯದರ್ಶಿ ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.