ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸೆ. 22ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೋಗ ಜಲಪಾತವೂ ಸೇರಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿದ, ಗುರುತಿಸಲು ಸಾಧ್ಯವಾಗದ ಅಜ್ಞಾತ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸಲು ಉದ್ದೇಶಿಸಿದ್ದೇವೆ. ಅದಕ್ಕಾಗಿ ವಿನೂತನ ರೀತಿಯ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದೇವೆ ಎಂದರು.
₹120 ಕೋಟಿ ವೆಚ್ಚದ ಪ್ರಸ್ತಾವ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು ₹120 ಕೋಟಿ ವೆಚ್ಚದ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಲು ಪ್ರಯತ್ನ ಆರಂಭಿಸಿದ್ದಾರೆ ಎಂದು ಹೇಳಿದರು.
ವೆಬ್‌ಸೈಟ್ ಸಿದ್ಧ: ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಕ್ರೀಡೆ– ಸಾಹಸಕ್ಕೆ ಮಹತ್ವ ಪಡೆದುಕೊಂಡಿದೆ. ಜೋಗ– ಜಲಪಾತದಿಂದ ಆಗುಂಬೆಯ ಸೂರ್ಯಾಸ್ತದವರೆಗಿನ ಅನೇಕ ವಿಷಯಗಳಿಗೆ ಜೀವಂತಿಕೆ ಪಡೆದಿದೆ. ಇಲ್ಲಿನ ಕಡಿದಾದ ಕಣಿವೆಗಳು, ಮೈಜುಮ್ಮೆನಿಸುವಂತ ದೃಶ್ಯಗಳು, ರೋಮಾಂಚಕ ಸಾಹಸ– ಕ್ರೀಡೆಗಳಿಗೆ ಜಿಲ್ಲೆ ಸದಾ ನೆನಪಿನಲ್ಲಿ ಉಳಿಯಲಿದೆ. ಇಲ್ಲಿನ ಪ್ರವಾಸಿ ತಾಣಗಳು, ಮಂದಿರ– ಮಸೀದಿ– ಚರ್ಚ್‌ಗಳು, ಐತಿಹಾಸಿಕ ಸ್ಥಳಗಳು, ಕವಿ– ಕಲಾವಿದರು, ಸಾಹಿತ್ಯ, ನೃತ್ಯ ಸಂಗೀತ ಕ್ಷೇತ್ರದ ಸಾಧಕರು, ನದಿ, ತೊರೆ, ಜಲಪಾತಗಳು, ತಪ್ಪಲು ಪ್ರದೇಶಗಳ ವಿವರಗಳನ್ನು ಸಾಮಾಜಿಕ ಜಾಲತಾಣ ಬಳಸಿಕೊಂಡು ಜಗತ್ತಿನಾದ್ಯಂತ ಪರಿಚಯಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ವೆಬ್‌ಸೈಟ್ ವಿನ್ಯಾಸಗೊಳಿಸಿದ್ದು, ಸೆ. 22ರಂದು ಲೋಕಾರ್ಪಣೆಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ, ಶೇಖರ್ ಗೌಳೇರ್ ಉಪಸ್ಥಿತರಿದ್ದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ಸ್ಪರ್ಧೆ ಹಲವು..
ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಮಾತನಾಡಿ ಪ್ರವಾಸೋದ್ಯಮ ದಿನಕ್ಕೆ ಪೂರಕವಾಗಿ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳ ಆಯೋಜಿಸಲಾಗಿದೆ. ಆಸಕ್ತರು ಆ. 11 ರಿಂದ 20ರೊಳಗಾಗಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಸ್ಪರ್ಧಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ಸಮಿತಿಯ ನಿರ್ಣಯದಂತೆ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದರು.
ವಿಡಿಯೋಗ್ರಫಿ ಸ್ಪರ್ಧೆ: ವಿಜೇತರಾದವರಿಗೆ ಮೊದಲ ಬಹುಮಾನ ₹40000 ದ್ವಿತೀಯ ₹30000 ಹಾಗೂ ತೃತೀಯ ಬಹುಮಾನ ₹ 20000 ನೀಡಲಾಗುವುದು. ಅಲ್ಲದೇ ₹25000 ನಗದು ಒಳಗೊಂಡ ವಿಶೇಷ ಬಹುಮಾನ ನೀಡಲಾಗುವುದು.
ಫೋಟೊಗ್ರಫಿ ಮತ್ತು ರೀಲ್ಸ್‌ಸ್ಪರ್ಧೆ: ವಿಜೇತರಿಗೆ ಅನುಕ್ರಮವಾಗಿ ₹8000 ₹5000 ಮತ್ತು ₹3000 ನಗದು ಪುರಸ್ಕಾರ ನೀಡಲಾಗುವುದು. ಅಲ್ಲದೇ ₹10000 ವಿಶೇಷ ಬಹುಮಾನ ನೀಡಲಾಗುವುದು.
ಲಾಂಛನ ವಿನ್ಯಾಸ ಸ್ಪರ್ಧೆ: ಜಿಲ್ಲೆಯ ವಿಶೇಷತೆಗಳ ಬಿಂಬಿಸುವ ಅತ್ಯುತ್ತಮ ಲಾಂಛನ ವಿನ್ಯಾಸ ಮಾಡಿದವರಿಗೆ ₹30000 ಬಹುಮಾನ ನೀಡಲಾಗುವುದು. ಘೋಷವಾಕ್ಯ ಸ್ಪರ್ಧೆ (TAGLINE) : ಜಿಲ್ಲೆಯ ಮಹತ್ವ ಪರಿಚಯಿಸುವ ಘೋಷವಾಕ್ಯ ರಚಿಸುವ ಒಬ್ಬರಿಗೆ ₹5000 ನಗದು ಬಹುಮಾನ ನೀಡಲಾಗುವುದು ಎಂದರು.
ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಡಿಸೆಂಬರ್ ವೇಳೆಗೆ ಪೂರ್ಣ
‘ಸೋಗಾನೆ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಅಗತ್ಯ ತಾಂತ್ರಿಕ ಪರಿಕರಗಳು ಶಿವಮೊಗ್ಗಕ್ಕೆ ಬಂದಿವೆ. ಅದಕ್ಕೆ ಅಗತ್ಯವಿರುವ ಸಿವಿಲ್ ಕಾಮಗಾರಿ ಕೈಗೆತ್ತಿಕೊಳ್ಳಲು ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದೆ. ಕೆಲಸ ಆರಂಭವಾಗಿದ್ದು ಮೂರು ತಿಂಗಳಲ್ಲಿ ಕೆಲಸ ಮುಗಿಸಿ ಡಿಸೆಂಬರ್ ವೇಳೆಗೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.