ADVERTISEMENT

ಶಿವಮೊಗ್ಗ | ಕಾಡಂಚಿನಲ್ಲಿ ವಿಷಕಾರಿ ಕೈಗಾರಿಕಾ ತ್ಯಾಜ್ಯ ಪತ್ತೆ

ದೂರು ದಾಖಲಿಸಿ, ತನಿಖೆಗೆ ಮುಂದಾದ ಸಿಐಡಿ ಅರಣ್ಯ ತನಿಖಾ ದಳ

ವೆಂಕಟೇಶ ಜಿ.ಎಚ್.
Published 18 ಜೂನ್ 2025, 7:07 IST
Last Updated 18 ಜೂನ್ 2025, 7:07 IST
ಹೊಸನಗರ ತಾಲ್ಲೂಕಿನ ಪುರಪ್ಪೆಮನೆ ಗ್ರಾಮದ ಬಳಿ ಕಾಡಂಚಿನ ರಸ್ತೆ ಪಕ್ಕದಲ್ಲಿ ಪತ್ತೆಯಾದ ಕೈಗಾರಿಕಾ ತ್ಯಾಜ್ಯ
ಹೊಸನಗರ ತಾಲ್ಲೂಕಿನ ಪುರಪ್ಪೆಮನೆ ಗ್ರಾಮದ ಬಳಿ ಕಾಡಂಚಿನ ರಸ್ತೆ ಪಕ್ಕದಲ್ಲಿ ಪತ್ತೆಯಾದ ಕೈಗಾರಿಕಾ ತ್ಯಾಜ್ಯ   

ಶಿವಮೊಗ್ಗ: ಅಪಾಯಕಾರಿ ರಾಸಾಯನಿಕಗಳ ಒಳಗೊಂಡ ಕೈಗಾರಿಕಾ ತ್ಯಾಜ್ಯವನ್ನು ಅರಣ್ಯ ಪ್ರದೇಶದಲ್ಲಿ ಎಸೆಯುತ್ತಿರುವ ಅಘಾತಕಾರಿ ಸಂಗತಿಯನ್ನು ಸಿಐಡಿ ಅರಣ್ಯ ತನಿಖಾ ದಳ ಪತ್ತೆ ಮಾಡಿದೆ. 

ಕಾಡುಪ್ರಾಣಿಗಳ ಸುರಕ್ಷತೆ ನಿಟ್ಟಿನಲ್ಲಿ ಈ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ದಳದ ಅಧಿಕಾರಿಗಳು, ಹೊಸನಗರ ಆರ್‌ಎಫ್‌ಒ ಮೂಲಕ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಹೊಸನಗರ ತಾಲ್ಲೂಕಿನ ಪುರಪ್ಪೆಮನೆ ಹಾಗೂ ಹರಿದ್ರಾವತಿ ಗ್ರಾಮಗಳ ವ್ಯಾಪ್ತಿಯ ಕಾಡಂಚಿನಲ್ಲಿ ತ್ಯಾಜ್ಯ ಎಸೆಯಲಾಗಿದೆ. ಹೊಸನಗರ–ಸಾಗರ ನಡುವಿನ ಈ ರಸ್ತೆ ದಟ್ಟ ಅರಣ್ಯವನ್ನು ಒಳಗೊಂಡಿದೆ. ಕಾಡು ಪ್ರಾಣಿಗಳ ಓಡಾಟವೂ ಇಲ್ಲಿ ನಿರಂತರವಾಗಿದೆ.

ADVERTISEMENT

ಒಂದೇ ಕಡೆ ತ್ಯಾಜ್ಯ ರಾಶಿ ಹಾಕಿದರೆ ಸಿಕ್ಕಿಬೀಳಬಹುದು ಎಂಬ ಕಾರಣಕ್ಕೆ ನಾಲ್ಕು ಕಡೆ ಹಾಕಲಾಗಿದೆ. ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರಪ್ಪೆಮನೆ ಹಾಗೂ ದೇವರಕೊಪ್ಪ ಗ್ರಾಮಗಳ ಬಳಿ ಹಾಗೂ ಹರಿದ್ರಾವತಿ ಗ್ರಾಮದ ಸಮೀಪ ಎರಡು ಕಡೆ ತ್ಯಾಜ್ಯ ಎಸೆಯಲಾಗಿದೆ ಎಂದು ಸಿಐಡಿ ಅರಣ್ಯ ತನಿಖಾದಳದ ಪಿಎಸ್‌ಐ ಕೆ.ವಿನಾಯಕ ಹೇಳುತ್ತಾರೆ.

ಆಹಾರ ಸರಪಳಿಗೆ ಕುತ್ತು:

ಕೈಗಾರಿಕಾ ತ್ಯಾಜ್ಯವನ್ನು ಸುಲಭವಾಗಿ ಸಿಗುವ ಆಹಾರ ಎಂದು ಪ್ರಾಣಿಗಳು ಸೇವಿಸಬಹುದು. ಅದರಲ್ಲಿನ ರಾಸಾಯನಿಕವು ಹೊಟ್ಟೆಯೊಳಗೆ ಹೋದರೆ ಅವುಗಳ ಕರುಳಲ್ಲಿ ಊತ ಬರಬಹುದು. ಜೀರ್ಣ ಆದರೂ ವಿಷ ದೇಹದೊಳಗೆ ಸೇರಿ ಸಾಯಲೂಬಹುದು. ಜಿಂಕೆಗಳು ಈ ತ್ಯಾಜ್ಯ ತಿಂದರೆ ಅವುಗಳನ್ನು ಬೇಟೆಯಾಡುವ ಚಿರತೆಗಳ ದೇಹಕ್ಕೂ ಈ ವಿಷ ಸೇರಲಿದೆ. ಪ್ರಾಣಿಗಳ ಪ್ರಾಣಕ್ಕೂ ಕುತ್ತು. ಪರಿಸರಕ್ಕೂ ಹಾನಿ.

ಈ ತ್ಯಾಜ್ಯ ಮಳೆ ನೀರಿನ ಮೂಲಕ ಹಳ್ಳ–ಕೊಳ್ಳ, ನದಿಗಳ ಸೇರಿದರೆ ಮೀನುಗಳು ಮತ್ತು ನೀರು ಕುಡಿಯುವ ಪ್ರಾಣಿ, ಮನುಷ್ಯರ ಮೇಲೂ ಪರಿಣಾಮ ಬೀರುತ್ತದೆ. ಒಟ್ಟಾರೆ ಆಹಾರ ಸರಪಳಿಯೇ ಅಸಮತೋಲನವಾಗಲಿದೆ. ಹೀಗಾಗಿಯೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂಬಂಧಿಸಿದ ಗ್ರಾಮ ಪಂಚಾಯ್ತಿಗಳಿಗೂ ಪತ್ರ ಬರೆದು ಮಾಹಿತಿ ನೀಡಿ ಮುಂದೆ ಇಂತಹದ್ದು ಪುನರಾರ್ತನೆಯಾಗದಂತೆ ಎಚ್ಚರವಹಿಸಲು ಹೇಳಿದ್ದೇವೆ ಎಂದು ವಿನಾಯಕ ತಿಳಿಸಿದರು.

ತ್ಯಾಜ್ಯ ವಾಸನೆಯಿಂದ ಕೂಡಿದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದೇವೆ. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಂದ ರಾತ್ರಿ ವೇಳೆ ಅರಣ್ಯದಂಚಿಗೆ ತಂದು ಹಾಕಿರಬಹುದು ಎಂಬ ಅನುಮಾನವಿದೆ. ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಗರ–ಪಟ್ಟಣಗಳಿಗೆ ಹತ್ತಿರವಿರುವ ಕಾಡಂಚಿನ ಪ್ರದೇಶಗಳಲ್ಲಿ ನಿಗಾ ಇಟ್ಟಿದ್ದೇವೆ. ಕೈಗಾರಿಕಾ ತ್ಯಾಜ್ಯ ಮಾತ್ರವಲ್ಲ ಘನತ್ಯಾಜ್ಯ ವಿಲೇವಾರಿ ಮಾಡಿದರೂ ಪ್ರಕರಣ ದಾಖಲಿಸಲಿದ್ದೇವೆ. ಕೆ.ವಿನಾಯಕ್ ಪಿಎಸ್‌ಐ ಸಿಐಡಿ ಅರಣ್ಯ ತನಿಖಾ ದಳ

ಕೈಗಾರಿಕಾ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಂಬಂಧಿಸಿದವರಿಗೆ ತಿಳಿವಳಿಕೆ ಕೊಟ್ಟಿರುತ್ತೇವೆ. ಲೈಸೆನ್ಸ್ ಕೊಡುವಾಗಲು ನಿಬಂಧನೆ ವಿಧಿಸಿರುತ್ತೇವೆ. ಇದನ್ನು ಪರಿಶೀಲಿಸಲಾಗುವುದು
ವಿ.ರಮೇಶ್ ಶಿವಮೊಗ್ಗ ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ

ಪ್ರಾಣಿ–ಮನುಷ್ಯರ ಆರೋಗ್ಯಕ್ಕೆ ತೊಂದರೆ.. ಅದು ಕೈಗಾರಿಕಾ ತ್ಯಾಜ್ಯ ಆಗಿದ್ದರೆ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾರ ಲೋಹದ ಅಂಶಗಳಾದ ಸೀಸ ಪಾದರಸ ಅಲ್ಯೂಮಿನಿಯಂ ಕೀಟನಾಶಕ ಮೈಕ್ರೊ ಪ್ಲಾಸ್ಟಿಕ್ ಇರುತ್ತವೆ. ಅದನ್ನು ಸೇವಿಸುವ ಪ್ರಾಣಿ ಜಲಚರ ಹಾಗೂ ಮನುಷ್ಯನ ನರ ವ್ಯವಸ್ಥೆ ಹಾಗೂ ಮೆದುಳಿಗೆ ತೊಂದರೆ ಆಗಲಿದೆ. ಪ್ರಾಣಿಗಳ ಸಂತಾನೋತ್ಪತ್ತಿಗೂ ಅಡ್ಡಿಯಾಗಲಿದೆ. ಬಯೋ ಮ್ಯಾಗ್ನಿಫಿಕೇಶನ್‌ ಹಾಗೂ ಬಯೋ ಅಕಿಮಿಲೇಶನ್‌ ಆದರೆ ಆಹಾರ ಸರಪಳಿ ಮೂಲಕ ಪ್ರಾಣಿಗಳು ಮೀನು ತಿನ್ನುವ ಹದ್ದು ಕೂಡ ಈ ವಿಷದಿಂದ ಬಳಲುತ್ತದೆ ಎಂದು ವನ್ಯಜೀವಿ ತಜ್ಞ ಡಾ.ಮುರಳಿ ಮನೋಹರ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.