ಕಾರ್ಗಲ್: ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಬೀಳುತ್ತಿದ್ದು, ವಿದ್ಯುತ್ ಸಂಪರ್ಕ ಸ್ಥಿರಗೊಳಿಸುವುದೇ ಮೆಸ್ಕಾಂ ಸಿಬ್ಬಂದಿಗೆ ಸವಾಲಾಗಿದೆ.
ಅರಣ್ಯ ಪ್ರದೇಶವೇ ಹೆಚ್ಚಿರುವ ಇಲ್ಲಿನ ಭೂ ಭಾಗಗಳು ಮತ್ತು ಅರಣ್ಯದ ನಡುವೆ ವಿದ್ಯುತ್ ತಂತಿಗಳು ಹಾದು ಹೋಗಿರುವ ಕಾರಣ ಗಾಳಿ ಬೀಸುತ್ತಿದ್ದಂತೆ ಮರಗಳು ಉರುಳುತ್ತಿವೆ.
ಭೂಮಿಯ ಆಳಕ್ಕೆ ಬೇರೂರದ ಅಕೇಶಿಯಾ ಮರಗಳು ಹೆಚ್ಚು ಬೀಳುತ್ತಿವೆ. ವಿದ್ಯುತ್ ಸಂಪರ್ಕ ಜಾಲದ ಸಮೀಪದಲ್ಲೇ ಅಕೇಶಿಯಾ ಮರಗಳು ಇರುವ ಕಾರಣ ಬುಡ ಸಮೇತ ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿವೆ.
ವಿದ್ಯುತ್ ಸಂಪರ್ಕ ಕಡಿತವಾಗುತ್ತಿದ್ದಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆ ಜಾಲವೂ ಸ್ಥಗಿತಗೊಂಡು ಈ ಭಾಗದ ನಿವಾಸಿಗಳು ಪರದಾಡುವಂತಾಗಿದೆ.
ಒಂದು ತಿಂಗಳಿನಿಂದ ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸಂತೋಷ್ ಒತ್ತಾಯಿಸಿದರು.
ವಿದ್ಯುತ್ ಸರಬರಾಜು ಮಾರ್ಗದಲ್ಲಿ ಅವೈಜ್ಞಾನಿಕವಾಗಿ ಅಡಿಕೆ ತೋಟ ಮಾಡಲಾಗಿದೆ. ಅಡಿಕೆ ಗಿಡಗಳು ಮತ್ತು ಅಕೇಶಿಯಾ ಮರಗಳು ಬುಡ ಸಮೇತ ಬೀಳುತ್ತಿರುವುದರಿಂದ ಹೆಚ್ಚಿನ ಸಮಸ್ಯೆಯಾಗಿದೆ ಎಂದು ಲೈನ್‌ಮ್ಯಾನ್ ಸಂಗಮೇಶ್ವರ ಹೇಳಿದರು.
‘ಜೋಗ ಉಪವಿಭಾಗದ ವ್ಯಾಪ್ತಿಯಲ್ಲಿ ಸುಮಾರು 72 ವಿದ್ಯುತ್ ಕಂಬಗಳು ಮರಗಳು ಬಿದ್ದು ಮುರಿದು ಹೋಗಿವೆ. ಎಲ್ಲವನ್ನೂ ಬದಲಾಯಿಸಲಾಗಿದೆ. ನಾಗವಳ್ಳಿ, ಕೋಗಾರು, ಅರಳಗೋಡು, ಕಾರ್ಗಲ್ ಭಾಗದಲ್ಲಿ ಲೈನ್‌ಮ್ಯಾನ್‌ಗಳ ಕೊರತೆ ಇದೆ. ಕೇಂದ್ರ ಸರ್ಕಾರದ ಆದೇಶದಂತೆ 15 ವರ್ಷ ಮೇಲ್ಪಟ್ಟ ಲಾರಿಗಳನ್ನು ಬಳಸುವಂತಿಲ್ಲ ಎಂಬ ಕಾರಣ ಕೊಂಚ ಸಮಸ್ಯೆಯಾಗಿತ್ತು. ಸದ್ಯ ಹೊಸ ಲಾರಿಗಳು ಬಂದಿದ್ದು, ವಿದ್ಯುತ್ ಕಂಬಗಳನ್ನು ಸಾಗಿಸಲು ಅನುಕೂಲವಾಗಿದೆ. ಶೀಘ್ರ ವಿದ್ಯುತ್ ಕಂಬಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೆಸ್ಕಾಂ ಜೋಗ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ನಿರ್ದೇಶಕ ಪ್ರವೀಣ್ ಪಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.