ADVERTISEMENT

ಆತ್ಮಹತ್ಯೆ ಯತ್ನ ಎಂದು ನಂಬಿದ್ದ ಸಿಬ್ಬಂದಿ: ಮಲಗಿ ಬೋಗಿಯಲ್ಲಿ ಬಂದಿಯಾಗಿದ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:59 IST
Last Updated 12 ಜನವರಿ 2022, 5:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಬೆಂಗಳೂರಿನಿಂದ ರೈಲಿನಲ್ಲಿ ಬಂದಿದ್ದ ಮಹಿಳೆಯೊಬ್ಬರುತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ನಿಲ್ದಾಣದಲ್ಲಿ ನಿಂತಿದ್ದ ರೈಲು ಬೋಗಿಯಲ್ಲೇ ನೇಣು ಹಾಕಿ ಕೊಳ್ಳಲು ಯತ್ನಿಸಿದ್ದಾರೆ ಎಂಬ ನಿಲುವು ವಿಚಾರಣೆ ವೇಳೆ ಸುಳ್ಳೆಂದು ಗೊತ್ತಾಗಿ, ಆ ಮಹಿಳೆ ಹಾಗೂ ಮಕ್ಕಳು ರೈಲಿನಲ್ಲೇ ಸಿಲುಕಿದ್ದ ಸಂಗತಿ ತಿಳಿದುಬಂದಿದೆ.

ಹೊನ್ನಾಳಿಯ ನಿವೇದಿತಾ ಬೆಂಗಳೂರಿನಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ರೈಲಿನಲ್ಲಿ ಬಂದಿದ್ದರು. ಬೋಗಿಯಲ್ಲಿದ್ದ ಫ್ಯಾನ್‌ಗೆ ತಮ್ಮದೇ ವೇಲ್ ಕಟ್ಟಿದ್ದನ್ನು ಗಮನಿಸಿದ ಸ್ವಚ್ಛತಾ ಸಿಬ್ಬಂದಿ ಈಕೆ ರೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಭಾವಿಸಿ, ಬಾಗಿಲು ತೆಗೆಯುವಂತೆ ಮನವೊಲಿಸಿದ್ದರು. ಬಾಗಿಲು ತೆಗೆದ ಬಳಿಕ ನಿವೇದಿತಾ ಮತ್ತು ಆಕೆಯ ಮಕ್ಕಳನ್ನು ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದರು.

ವಿಚಾರಣೆ ವೇಳೆ ಹೊರಬಿತ್ತು ಸತ್ಯ: ಮಹಿಳೆ ಮತ್ತು ಮಕ್ಕಳನ್ನು ಸಾಗರಕ್ಕೆ ಕರೆತಂದ ರೈಲ್ವೆ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ನಿವೇದಿತಾ ತಾವು ಆತ್ಮಹತ್ಯೆಗೆ ಯತ್ನಿಸಿರಲಿಲ್ಲ ಎಂದು
ಸ್ಪಷ್ಟಪಡಿಸಿದ್ದಾರೆ.

ADVERTISEMENT

ನಿವೇದಿತಾ ತಮ್ಮ ಗಂಡನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಮ್ಮ ಚಿಕ್ಕ ಮಗು ಆಟವಾಡುವಾಗ ಬಿದ್ದು ಮೂಳೆ ಮುರಿದುಕೊಂಡಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ಶಿವಮೊಗ್ಗಕ್ಕೆ ಮಗುವಿನ ಚಿಕಿತ್ಸೆಗಾಗಿ ರೈಲಿನಲ್ಲಿ ಬಂದಿದ್ದರು. ರೈಲು ಶಿವಮೊಗ್ಗ ತಲುಪುವ ಹೊತ್ತಿಗೆ ನಿವೇದಿತಾ ಗಾಢ ನಿದ್ರೆಗೆ ಜಾರಿದ್ದರು. ಬೆಳಿಗ್ಗೆ 7.30ರ ಹೊತ್ತಿಗೆ ತಾಳಗುಪ್ಪ ತಲುಪಿದಾಗ ಎಚ್ಚರವಾಗಿತ್ತು. ಶಿವಮೊಗ್ಗದಲ್ಲಿ ಇಳಿಯುವ ಬದಲು ತಾಳಗುಪ್ಪ ತಲುಪಿರುವ ವಿಚಾರ ತಿಳಿದು ನಿವೇದಿತಾ ಗಲಿಬಿಲಿಗೊಂಡರು.

ಪ್ರಯಾಣಿಕರೆಲ್ಲ ರೈಲು ಇಳಿದ ಮೇಲೆ ಬೋಗಿಯನ್ನು ಸಿಬ್ಬಂದಿ ಬಂದ್ ಮಾಡಿದ್ದರು. ಅದೇ ಹೊತ್ತಿಗೆ ನಿವೇದಿತಾ ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಮಗುವನ್ನು ಮಲಗಿಸಲು ತಮ್ಮದೇ ವೇಲ್‌ನಿಂದ ಕಟ್ಟಿದ್ದ ಜೋಲಿಯನ್ನು ಕಂಡು ಸಿಬ್ಬಂದಿ ನೇಣು ಕುಣಿಕೆ ಎಂದು ಭಾವಿಸಿದ್ದರು.

ಅಸಲಿ ವಿಚಾರ ತಿಳಿದು ಸಾಗರ ರೈಲ್ವೆ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.