ತುಮರಿ: ಶರಾವತಿ ಹಿನ್ನೀರಿನ ಹೊಳೆಬಾಗಿಲು ಭಾಗದಿಂದ ಅಂಬಾರಗೋಡ್ಲು ತಟದತ್ತ ಸಾಗುತ್ತಿದ್ದ ಸಿಗಂದೂರು ಲಾಂಚ್‌ನ (ಶರಾವತಿ-1) ಸ್ಟೇರಿಂಗ್ ಲಾಕ್ ತುಂಡಾದ ಪರಿಣಾಮ, ಕೆಲಸಮಯ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.
ಶರಾವತಿ ಜಲಾನಯನ ಪ್ರದೇಶದಲ್ಲಿ ಹಲವೆಡೆ ವೀಪರೀತ ಮಳೆಯ ನಡುವೆ ಅಗತ್ಯ ಸೇವೆಗೆ ಲಾಂಚ್ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಅಂಬಾರಗೋಡ್ಲು ತೀರಕ್ಕೆ ಹಲವು ವಾಹನ, ಜನರನ್ನು ಹೊತ್ತು ಬರುತ್ತಿದ್ದ ಲಾಂಚ್, ಏಕಾಏಕಿ ಲಾಕ್ ತುಂಡಾಗಿ ಪರಿಣಾಮ ಈ ಘಟನೆ ನಡೆದಿದೆ. ಈ ವೇಳೆ ಚಾಲಕನ ನಿಯಂತ್ರಣ ಇಲ್ಲದೆ ಲಾಂಚ್ ಗಾಳಿಯಲ್ಲಿ ದಿಕ್ಕು ಬದಲಿಸಿದ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದರು.
ತಕ್ಷಣವೇ ಸೇತುವೆ ನಿರ್ಮಾಣದ ದಿಲೀಪ್ ಕಂಪನಿಯನ್ನು ಸಂಪರ್ಕಿಸಿದ ಲಾಂಚ್ ಸಿಬ್ಬಂದಿ, ಬೋಟ್ ಸಹಾಯದಿಂದ ಹಗ್ಗ ಕಟ್ಟಿ ತೀರಕ್ಕೆ ಲಾಂಚ್ ಎಳೆದು ತರುವಲ್ಲಿ ಯಶಸ್ವಿಯಾದರು. ಲಾಂಚ್‌ನಲ್ಲಿ ಬ್ಯಾಕೋಡು, ಸುಳ್ಳಳ್ಳಿ, ಸಿಗಂದೂರು ಭಾಗದಿಂದ ಸಾಗರಕ್ಕೆ ತೆರಳುತ್ತಿದ್ದ ಬಸ್ ಸೇರಿದಂತೆ 45 ಪ್ರಯಾಣಿಕರು ಇದ್ದರು ಎಂದು ಸಹಾಯಕ ಕಡವು ನಿರೀಕ್ಷಕ ದಾಮೋದರ ತಿಳಿಸಿದ್ದಾರೆ.
‘ಘಟನೆಯಲ್ಲಿ ಯಾವುದೇ ಆಪಾಯ ಸಂಭವಿಸಿಲ್ಲ. ಸುರಕ್ಷಿತವಾಗಿ ಲಾಂಚ್ ಎಳೆದು ತರಲಾಗಿದೆ. ಹೊಳೆಬಾಗಿಲು - ಅಂಬಾರಗೋಡ್ಲು ತಟದಲ್ಲಿ ಕಾರ್ಯ ನಿರ್ವಹಿಸುವ ಶರಾವತಿ 1, ಶರಾವತಿ 2 ಲಾಂಚ್ ಸುಸ್ಥಿತಿಯಲ್ಲಿವೆ. ಅಧಿಕ ಒತ್ತಡದಿಂದ ಸ್ಟೇರಿಂಗ್ ಲಾಕ್ ತುಂಡಾಗಿರಬಹುದು ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಕಡವು ನಿರೀಕ್ಷಕ ಧನೇಂದ್ರ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.