ತುಮರಿ: ತಾಲ್ಲೂಕಿನ ಕರೂರು, ಬಾರಂಗಿ ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಆರೋಪದ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಬುಧವಾರ ತಡರಾತ್ರಿ 8 ಸ್ಥಳಗಳ ಮೇಲೆ ದಾಳಿ ನಡೆಸಿ 3 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಮಾರ್ಚ್ 26 ರಂದು ‘ಹಳ್ಳಿಹಳ್ಳಿಯಲ್ಲೂ ಅಕ್ರಮ ಮದ್ಯದ ಹೊಳೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ಕರೂರು ಹೋಬಳಿಯ ಹೊಸಕೊಪ್ಪ, ಕಾರಣಿ, ಕಟ್ಟಿನಕಾರು ನೆಲ್ಲಿಬೀಡು, ಹಾರಿಗೆ, ಬ್ಯಾಕೋಡು, ತುಮರಿ ಹೋಟೆಲ್ ಹಾಗೂ ಮದ್ಯ ಮಾರಾಟ ಮಳಿಗೆ, ಬಾರಂಗಿ ಹೋಬಳಿಯ ಬಿಳಿಗಾರು ಅಂಗಡಿ, ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. 3 ಲೀಟರ್ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಿರಾಣಿ ಅಂಗಡಿ ಮಾಲೀಕರಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಅಬಕಾರಿ ಸಬ್ ಇನ್‌ಸ್ಪೆಕ್ಟರ್ ಸಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.