ತುಮರಿ: ತಾಲ್ಲೂಕಿನ ಶರಾವತಿ ಸಿಂಗಳೀಕ ಅಭಯಾರಣ್ಯದ ಅಂಬಾರಗುಡ್ಡದ ಬೆಟ್ಟ ಸಾಲಿಗೆ ಬುಧವಾರ ಬೆಂಕಿ ತಾಗಿದ್ದು, ಅಮೂಲ್ಯ ಸಸ್ಯ ಸಂಪತ್ತು, ಸಣ್ಣ ಪುಟ್ಟ ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗಿದೆ.
‘ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂಬಾರಗುಡ್ಡದ ಆವಿಗೆ ಗ್ರಾಮದ ಗುಡ್ಡ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಕ್ರಮ ಕೈಗೊಂಡಿಲ್. ಇದರಿಂದ ಬೆಂಕಿ ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿನ ದಟ್ಟ ಅರಣ್ಯಕ್ಕೂ ಹರಡಿ ಸಸಿಗಳು ಹಾಗೂ ಮರಗಳು ಸುಟ್ಟು ಹೋಗಿವೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದ ಬೆಟ್ಟ ಸಾಲಿನ ಅರಣ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನವಿಲು, ಅಳಿಲು, ಮೊಲ, ನರಿ, ಹಂದಿ, ಕಾಡು ಕೋಳಿ ಸೇರಿ ಹಲವಾರು ಹುಲ್ಲುಗಾವಲಿನಲ್ಲಿ ವಾಸ ಮಾಡುವ ಪಕ್ಷಿಗಳು ನೆಲೆಸಿವೆ. ಅಂಬಾರಗುಡ್ಡದ ಸುತ್ತಲಿನ ಬೆಟ್ಟದಲ್ಲಿ ಹುಲ್ಲುಗಾವಲು ಪ್ರದೇಶ ಇರುವುದರಿಂದ ಅಗತ್ಯವಿರುವ ಕಡೆ ಅರಣ್ಯ ಇಲಾಖೆ ಬೆಂಕಿ ರೇಖೆ ಎಳೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೋಗಾರು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಪ್ರತಿಕ್ರಿಯಿಸಿ, ‘ಬೆಂಕಿಯು ಸಮೀಪದ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದ ಭಾಗದಿಂದ ಬಂದಿರುವ ಸಾಧ್ಯತೆ ಇದೆ. ಪ್ರಾಣಿಗಳಿಗೆ ಹಾನಿಯಾಗಿರುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ’ ಎಂದು ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.