ಶಿವಮೊಗ್ಗ: ‘ಭರ್ತಿಯಾಗಿರುವ ಗಾಜನೂರಿನ ತುಂಗಾ ಜಲಾಶಯಕ್ಕೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಆರಗ ಜ್ಞಾನೇಂದ್ರ ಗುರುವಾರ ಬಾಗಿನ ಅರ್ಪಿಸಿದರು.
ಪ್ರಕೃತಿಗಿಂತ ದೊಡ್ಡ ಗುರು ಇರಲು ಸಾಧ್ಯವಿಲ್ಲ. ಪ್ರಕೃತಿ ಇದ್ದರೆ ಮಾತ್ರ ಜೀವ ಸಂಕುಲ ಬಾಳ್ವೆ ನಡೆಸಲು ಸಾಧ್ಯ. ಗುರುಪೂರ್ಣಿಮೆಯಂದೇ ನದಿಗೆ ಪೂಜೆ ಸಲ್ಲಿಸಲಾಗಿದೆ. ಈ ಬಾರಿ ಮುಂಗಾರು ಪೂರ್ವದಿಂದಲೇ ಉತ್ತಮ ಮಳೆ ಸುರಿದಿದೆ. ಇದರಿಂದ, ರೈತರ ಕೃಷಿ ಚಟುವಟಿಕೆ ಸೇರಿದಂತೆ ಬೀಜ ಬಿತ್ತನೆಗೆ ಅನುಕೂಲಕರವಾಗಿದೆ. ಇಲ್ಲಿ ಆಶಾದಾಯಕ ವಾತಾವರಣ ನಿರ್ಮಾಣಗೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸಂತಸ ವ್ಯಕ್ತಪಡಿಸಿದರು.
ಮೇ 14 ರಂದು ಅಂಬಾರಗೋಡ್ಲು– ಕಳಸವಳ್ಳಿ ಸೇತುವೆ ಉದ್ಘಾಟನೆ ಬಳಿಕ ಸಾಗರದ ನೆಹರೂ ಮೈದಾನದಲ್ಲಿ ಆಯೋಜನೆಗೊಂಡ ಸಾರ್ವಜನಿಕ ಸಭೆಯಲ್ಲಿ ₹2,000 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸುವರು. ಇಲ್ಲಿ ಶಿವಮೊಗ್ಗ ಜಿಲ್ಲೆಗೆ ಸೇರಿದ ₹600 ಕೋಟಿ ಹಾಗೂ ಅಕ್ಕಪಕ್ಕದ ಜಿಲ್ಲೆಗೆ ಸೇರಿದ ₹1,400 ಕೋಟಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಮುಹೂರ್ತ ನಿಗದಿ ಆಗಲಿದೆ ಎಂದರು.
‘ಈ ಬಾರಿ ಉತ್ತಮ ಮಳೆಯಾಗಿದೆ. ರೈತರೆಲ್ಲರೂ ಸಂತಸದಿಂದ ಇದ್ದಾರೆ. ಕುಡಿಯುವ ನೀರು ಪೂರೈಕೆಯ ಆಧಾರವಾಗಿರುವ ಜಲಾಶಯ ಕೃಷಿಗೂ ಆಸರೆಯಾಗಿದೆ. ಯಾರಿಗೂ ತೊಂದರೆ ನೀಡದಂತೆ ಪ್ರಾರ್ಥಿಸಿ ತುಂಗೆಗೆ ಬಾಗಿನ ಸಲ್ಲಿಸಲಾಗಿದೆ’ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪನಾಯ್ಕ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ನಗರ ಘಟಕ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಎಂಜಿನಿಯರ್ ಗಳಾದ ಸಾಹೇಶ್, ಜಗದೀಶ, ಮಂಜೇಶ್, ಗಿರಿಶ್ ಇದ್ದರು.
2026ರಿಂದ ವಂದೇ ಭಾರತ್ ರೈಲು ಸಂಚಾರ
ತಾಲ್ಲೂಕಿನ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರು ತಾಳಗುಪ್ಪದಿಂದ ಹೊನ್ನಾವರ ಹಾಗೂ ಸಿದ್ದಾಪುರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು ಸರ್ವೇ ಕಾರ್ಯ ನಡೆದಿದೆ. ಇದಕ್ಕೆ ಪೂರಕವಾಗಿ 2026ರ ಜನವರಿಯಿಂದ ವಂದೇ ಭಾರತ ರೈಲು ಸಂಚಾರ ಆರಂಭಿಸಲಿದೆ. ಶಿವಮೊಗ್ಗದಿಂದ ತಿರುಪತಿ ಚನ್ನೈ ಕೇರಳ ಸೇರಿದಂತೆ ಐದಾರು ರಾಜ್ಯಗಳಿಗೆ ರೈಲು ಸಂಚಾರ ಕಲ್ಪಿಸಲು ಇಲಾಖೆ ಚಿಂತನೆ ನಡೆಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
- ಅಧಿಕಾರದ ಆಸೆ ಜನರಿಗೆ ಅನ್ಯಾಯ
ಪೌರ ಕಾರ್ಮಿಕರಿಗೆ ಸರ್ಕಾರ ಅನ್ಯಾಯ ಮಾಡಿದೆ. ಚುನಾವಣೆ ಪೂರ್ವ ನೀಡಿದ್ದ ಆಶ್ವಾಸನೆಯನ್ನು ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಮರೆತಿದೆ. ಕಳೆದ ಎರಡು ವರ್ಷದಿಂದ ಸರ್ಕಾರ ನಡೆದರೆ ಸಾಕು ಎನ್ನುವ ತೀರ್ಮಾನಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಆಸ್ಪತ್ರೆಗಳ ಡಿ.ದರ್ಜೆ ನೌಕರರಿಗೆ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ. ಸರ್ಕಾರದಲ್ಲಿ ಕುರ್ಚಿಗಾಗಿ ತಿಕ್ಕಾಟ ನಡೆಯುತ್ತಿದೆ. ಅಭಿವೃದ್ಧಿ ಶೂನ್ಯದಿಂದ ಸರ್ಕಾರದ ವಿರುದ್ಧ ಜನರು ಶಾಪ ಹಾಕುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.