
ಶಿವಮೊಗ್ಗ: ಶಿವಮೊಗ್ಗದ ಜೀವನಾಡಿ ತುಂಗಾ ನದಿ ಹಾಗೂ ತುಂಗಾ ಕಾಲುವೆಯನ್ನು ಮೊದಲು ಸ್ವಚ್ಛಗೊಳಿಸಿ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಅಗತ್ಯವಿಲ್ಲದಿದ್ದರೂ ಪಾರ್ಕ್‌ಗಳಲ್ಲಿ ಜಿಮ್ ಉಪಕರಣಗಳ ಅಳವಡಿಕೆ ಮಾಡಿದ್ದೀರಿ. ಬಳಸುವವರು ಇಲ್ಲದೇ ಅವು ತುಕ್ಕು ಹಿಡಿಯುತ್ತಿದ್ದು, ಇದನ್ನು ತಪ್ಪಿಸಿ. ಹಸಿರೀಕರಣ ಹೆಸರಲ್ಲಿ ಹೊಸ ಯೋಜನೆಗಳು ಬೇಡ. ಇದುವರೆಗೆ ನೆಟ್ಟ ಗಿಡ–ಮರಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಜನರ ತೆರಿಗೆ ಹಣ ಉಳಿಸಿ...
ಇವು ಶಿವಮೊಗ್ಗದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ 2026–27ನೇ ಸಾಲಿನ ಬಜೆಟ್ ಮಂಡನೆಗೆ ಮುನ್ನ ಸಾರ್ವಜನಿಕರ ಅಹವಾಲು ಆಲಿಕೆಯ ಸಭೆಯಲ್ಲಿ ಕೇಳಿಬಂದ ಹಕ್ಕೊತ್ತಾಯಗಳು.
ಕೆಎಸ್‌ಸಿಎ ಮೈದಾನದ ಹೆಸರಲ್ಲಿ ನವುಲೆ ಕೆರೆಯ ಮಾರಣಹೋಮ ಮಾಡಿದ್ದೀರಿ. ಇನ್ನಾದರೂ ಅದಕ್ಕೆ ಜೀವ ಕೊಡಿ. ಸಾರ್ವಜನಿಕರು ದೂರು, ಅಳಲು ಹೇಳಿಕೊಳ್ಳಲು ಹಾಕಿರುವ ಸಹಾಯವಾಣಿಯೇ ಕೆಲಸ ಮಾಡುತ್ತಿಲ್ಲ. ಜನರು ತಮ್ಮ ಅಳಲಿಗೆ ಸಂಪರ್ಕಿಸುವುದು ಯಾರನ್ನು? ಎಂಬ ಆಕ್ರೋಶದ ಮಾತುಗಳೂ ಧ್ವನಿಸಿದವು.
ಹಳೆಯ ಅನುದಾನವೇ ಬಂದಿಲ್ಲ: 2025-2026ನೇ ಸಾಲಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ₹165 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇಲ್ಲಿಯತನಕ ಪಾಲಿಕೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಸಭೆಗೆ ತಿಳಿಸಿದರು.
ತುಂಗಾ ನದಿ ಸ್ವಚ್ಛತೆಗೆ ಮಹಾತ್ಮಗಾಂಧಿ ನಗರಯೋಜನೆ-2ಕ್ಕೆ ₹120 ಕೋಟಿ, ಎನ್.ಜಿ.ಟಿ. ಕಾಮಗಾರಿಗಳಿಗೆ ₹40 ಕೋಟಿ ಮಂಜೂರಾತಿ ದೊರಕಿದೆ. ಕೆಯುಐಡಿಎಫ್‌ಸಿ ಮೂಲಕವೇ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ ಎಂದರು.
ಪಾಲಿಕೆ ವ್ಯಾಪ್ತಿಯ ನವುಲೆ, ತ್ಯಾವರೆಚಟ್ನಹಳ್ಳಿ, ಗೋಪಿಶೆಟ್ಟಿಕೊಪ್ಪ, ಪುರಲೆ ಮೊದಲಾದ ನಾಲ್ಕು ಕೆರೆಗಳ ಅಭಿವೃದ್ಧಿಗೆ ₹25 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ. ಅದು ಡಿಪಿಆರ್ ಹಂತದಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪಾರ್ಕ್‌ಗಳ ಅಭಿವೃದ್ಧಿಗೆ ₹5 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ಮಾಯಣ್ಣಗೌಡ ಹೇಳಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ 196 ಪಾರ್ಕ್‌ಗಳಿದ್ದು, 98ರಲ್ಲಿ ಬೇಲಿ, ಕಾಂಪೌಂಡ್ ನಿರ್ಮಾಣ ಮೊದಲಾದ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಪಾರ್ಕ್‌ಗಳ ನಿರ್ವಹಣೆಗೆ ಪ್ರತ್ಯೇಕ ತೋಟಗಾರಿಕಾ ಇಲಾಖೆ ಆರಂಭಿಸಲಾಗಿದೆ. ಸೂಡಾದಿಂದ 53 ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಲ್ಕೀಶ್‌ಬಾನು, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.