ADVERTISEMENT

ಕಿರು ಉದ್ದಿಮೆ ಆರಂಭಕ್ಕೆ ಸಹಕಾರ

ಕೆಳದಿ ಶಿವಪ್ಪ ನಾಯಕ ಕೃಷಿ, ತೋಟಗಾರಿಕೆ ವಿ.ವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:13 IST
Last Updated 14 ಸೆಪ್ಟೆಂಬರ್ 2025, 5:13 IST
ಶಿವಮೊಗ್ಗದ ಜಿ. ಪಂ. ಸಭಾಂಗಣದಲ್ಲಿ ಫಲಾನುಭವಿಗಳಿಗೆ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಕಾರ್ಯಕ್ರಮವನ್ನು ಆರ್.ಸಿ.ಜಗದೀಶ್ ಉದ್ಘಾಟಿಸಿದರು.
ಶಿವಮೊಗ್ಗದ ಜಿ. ಪಂ. ಸಭಾಂಗಣದಲ್ಲಿ ಫಲಾನುಭವಿಗಳಿಗೆ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಕಾರ್ಯಕ್ರಮವನ್ನು ಆರ್.ಸಿ.ಜಗದೀಶ್ ಉದ್ಘಾಟಿಸಿದರು.   

ಶಿವಮೊಗ್ಗ: ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ಲಭ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ. ಜಗದೀಶ್ ತಿಳಿಸಿದರು.

ಆತ್ಮನಿರ್ಭರ ಭಾರತ ಅಭಿಯಾನ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತುನಿಗಮ ನಿಯಮಿತ (ಕೆಎಪಿಪಿಇಸಿ), ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಫಲಾನುಭವಿಗಳಿಗೆ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ವಿಶ್ವವಿದ್ಯಾಲಯದಿಂದ ಸಂಸ್ಕರಣೆಗೆ ಜಾಗ, ಪ್ರಯೋಗಾಲಯ ಹಾಗೂ ಬ್ಯಾಂಕ್ ಮೂಲಕ ಸಾಲ ಕೂಡ ಕೊಡಿಸಲಾಗುವುದು. ಜಿಲ್ಲೆಯಿಂದ 100 ಟನ್‌ಗಳಷ್ಟು ಅಪ್ಪೆ ಮಿಡಿ ವಿದೇಶಕ್ಕೆ ರಫ್ತಾಗುತ್ತಿದೆ. ಮೆಕ್ಕೆಜೋಳದಿಂದ 50ಕ್ಕೂ ಹೆಚ್ಚಿನ ಬಗೆಯ ಖಾದ್ಯ ಮಾಡಬಹುದು. ಹೊಸ ಹೊಸ ಖಾದ್ಯಗಳ ಸಂಶೋಧನೆಗೂ ಅವಕಾಶ ಇದೆ ಎಂದರು.

ರೈತರ ಆದಾಯ ಹೆಚ್ಚಿಸಿ ಅವರನ್ನೂ ಉದ್ದಿಮೆದಾರರನ್ನಾಗಿ ಮಾಡಲು ₹ 15 ಲಕ್ಷದವರೆಗೆ ಸಹಾಯಧನ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ₹ 10 ಸಾವಿರ ಕೋಟಿ ಮಂಜೂರು ಮಾಡಿವೆ ಎಂದು ಕೆಎಪಿಪಿಇಸಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಶಿವಪ್ರಕಾಶ್ ತಿಳಿಸಿದರು.
 
ಜಂಟಿ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಅನಾನಸ್ ಬೆಳೆಯನ್ನು ಆಯ್ಕೆ ಮಾಡಲಾಗಿದೆ. ನಂತರ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಿಗಳ ಉನ್ನತೀಕರಣಕ್ಕೆ ಮತ್ತು ವಿಸ್ತರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.
 
ಕೆಎಪಿಪಿಇಸಿ ಟೀಂ ಲೀಡರ್ ಅರವಿಂದ ಕರೆ ಮಾತನಾಡಿ, ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಬಲಪಡಿಸುವುದು, ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯ, ದಾಸ್ತಾನು ಶೇಖರಣೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ಇನ್‌ಕ್ಯೂಬೇಷನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರೆಯುವಿಕೆ ಹೆಚ್ಚಿಸುವುದು. ತಾಂತ್ರಿಕ ಸಂಸ್ಥೆಗಳ ಬಲಪಡಿಸಿ ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಸುಜಾತ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಬಾಬುರಾಮ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.