ADVERTISEMENT

‘ಖಾತ್ರಿ’ ಕೆಲಸಬಿಟ್ಟು ಪಂಚಾಯಿತಿ ಕಟ್ಟೆ ಕಾದರು!

ಎರಡು ತಿಂಗಳಿನಿಂದ ಕಾರ್ಮಿಕರಿಗೆ ಜಮೆಯಾಗದ ಉದ್ಯೋಗ ಖಾತ್ರಿ ಕೂಲಿ ಹಣ

ಚಂದ್ರಹಾಸ ಹಿರೇಮಳಲಿ
Published 7 ಫೆಬ್ರುವರಿ 2019, 13:02 IST
Last Updated 7 ಫೆಬ್ರುವರಿ 2019, 13:02 IST
ಶಿವರಾಮೇಗೌಡ
ಶಿವರಾಮೇಗೌಡ   

ಶಿವಮೊಗ್ಗ: ಉದ್ಯೋಗ ಖಾತ್ರಿ ಕೆಲಸ ಮಾಡಿದ್ದ ಜಿಲ್ಲೆಯ ಕಾರ್ಮಿಕರು ಈಗ ಕೆಲಸ ಬಿಟ್ಟು ಕೂಲಿ ಹಣಕ್ಕಾಗಿ ನಿತ್ಯವೂ ಗ್ರಾಮ ಪಂಚಾಯಿತಿಗಳ ಕಟ್ಟೆ ಕಾಯುತ್ತಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನಿಯಮಗಳ ಪ್ರಕಾರ ಕಾರ್ಡ್‌ ಹೊಂದಿರುವ ಕಾರ್ಮಿಕರ ಖಾತೆಗೆ ಅವರು ಕೆಲಸ ನೀಡಿದ 15 ದಿನಗಳ ಒಳಗೆ ಹಣ ನೀಡಬೇಕು. ಈ ಯೋಜನೆಗೂ ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆ (ಇಎಫ್ಎಂಎಸ್) ಅಳವಡಿಸಿದ ನಂತರ ಕೆಲಸಕ್ಕೆ ಹಾಜರಾದ ಪ್ರತಿ ಕಾರ್ಮಿಕರ ಖಾತೆಗೆ ನೇರವಾಗಿ ನಿಗದಿತ ಅವಧಿಯ ಒಳಗೆ ಹಣ ಜಮೆಯಾಗುತ್ತಿತ್ತು. ಆದರೆ, ಡಿಸೆಂಬರ್ ಹಾಗೂ ಜನವರಿ ಮಾಸದಲ್ಲಿ ಯಾರ ಖಾತೆಗೂ ಹಣ ಜಮೆ ಆಗಿಲ್ಲ.

ಜಿಲ್ಲೆಯಲ್ಲಿ 2,09,076 ಕುಟುಂಬಗಳ 4,69,053 ಜನರು ಉದ್ಯೋಗ ಖಾತ್ರಿಕೆಲಸಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 2,06,951 ಜನರು ಕಾರ್ಡ್ ಪಡೆದುಕೊಂಡಿದ್ದಾರೆ. 1.71,301 ಜನರು ಕೆಲಸಕ್ಕೆ ಬೇಡಿಕೆ ಮಂಡಿಸಿದ್ದಾರೆ. ಈ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ 2.34 ಲಕ್ಷ ಮಾನವ ದಿನಗಳನ್ನು ಸೃಜಿಸಿದೆ. ಅವರಲ್ಲಿ 589 ಕುಟುಂಬಗಳು 100 ದಿನಗಳನ್ನು ಪೂರೈಸಿವೆ.

ADVERTISEMENT

ಖಾತ್ರಿ ಬಜೆಟ್ ₨ 82.25 ಕೋಟಿ:

2018–19ನೇ ಸಾಲಿನ ಜಿಲ್ಲೆಯ ಉದ್ಯೋಗ ಖಾತ್ರಿ ಬಜೆಟ್‌ ₨ 82.25 ಕೋಟಿ. ಇಲ್ಲಿಯವರೆಗೆ ₨ 77.70 ಕೋಟಿ ಅನುದಾನಕ್ಕೆ ಅನುಮೋದನೆ ದೊರಕಿತ್ತು. ಈಗ ಎರಡು ದಿನಗಳ ₨ 28 ಕೋಟಿ ಬಾಕಿ ಇದೆ. ಅದರಲ್ಲಿ ಕಾರ್ಮಿಕರಿಗೆ ನೀಡಬೇಕಾದ ಬಾಕಿ ₨ 15 ಕೋಟಿ.

‘ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವ ಬಹುತೇಕ ಕೂಲಿ ಕಾರ್ಮಿಕರು ಅಂದು ದುಡಿದು ಅಂದೇ ಜೀವನ ಸಾಗಿಸುತ್ತಾರೆ. ಕೃಷಿ ಕಾರ್ಮಿಕರು ನಿತ್ಯವೂ ಕೂಲಿ ಪಡೆಯುತ್ತಾರೆ. ಕಟ್ಟಡ ಕೆಲಸಗಳಿಗೆ ತೆರಳುವವರಿಗೆ ವಾರಕ್ಕೆ ಒಮ್ಮೆ ಹಣ ದೊರೆಯುತ್ತದೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದವರಿಗೆ 15 ದಿನಗಳ ಒಳಗೆ ಹಣ ನೀಡಬೇಕು ಎಂದು ನಿಯಮ ರೂಪಿಸಲಾಗಿದೆ. ಆದರೂ, ಎರಡು ತಿಂಗಳು ಹಣ ನೀಡದಿರುವುದು ಕುಟುಂಬಗಳ ನಿರ್ವಹಣೆಗೆ ತೊಂದರೆಯಾಗಿದೆ. ನಿತ್ಯವೂ ಕೆಲಸ ಬಿಟ್ಟು ಪಂಚಾಯಿತಿಗೆ ಅಲೆಯುತ್ತಿದ್ದೇವೆ. ಮಕ್ಕಳಿಗೆ ಪರೀಕ್ಷಾ ಸಮಯವಾದ ಕಾರಣ ಅತ್ತ ಗಮನ ನೀಡಲೂ ಆಗುತ್ತಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ಉದ್ಯೋಗ ಖಾತ್ರಿ ಕಾರ್ಮಿಕ ವೆಂಕಟೇಶ್.

‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸುಮಾರು ₨ 450 ಕೋಟಿ ಉದ್ಯೋಗ ಖಾತ್ರಿ ಅನುದಾನದ ಬಾಕಿ ಬರಬೇಕಿದೆ. ಈ ವಾರದಲ್ಲಿ ₨ 105 ಕೋಟಿ ಸಿಗಲಿದೆ. ಜಿಲ್ಲೆಗೆ ಬರಬೇಕಿರುವ ಬಾಕಿ ₨ 28 ಕೋಟಿಯಲ್ಲಿ ಎಷ್ಟು ದೊರೆಯುತ್ತದೆ ಎಂಬುದನ್ನು ನೋಡಿಕೊಂಡು ಬಾಕಿ ಹಣ ನೀಡಲು ಪ್ರಸ್ತಾವ ಕಳುಹಿಸಲಾಗುವುದು’ ಎಂದು ಮಾಹಿತಿ ನೀಡಿದರುಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.