ADVERTISEMENT

ಭದ್ರಾ ಮೇಲ್ದಂಡೆ: ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ

ತುಂಗಾ, ಭದ್ರಾ ಜಲಾಶಯಗಳ ನೀರು ಬಳಕೆದಾರ ಕ್ರಿಯಾಸಮಿತಿ ಸಭೆಯಲ್ಲಿ ಕೆ.ಟಿ. ಗಂಗಾಧರ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 13:27 IST
Last Updated 3 ಜನವರಿ 2022, 13:27 IST
ಭದ್ರಾವತಿಯ ಬಿಆರ್‌ಪಿ ಭದ್ರಾ ಮೇಲ್ದಂಡೆ ಎಂಜಿನಿಯರ್‌ ಕಚೇರಿ ಎದುರು ಸೋಮವಾರ ನಡೆದ ತುಂಗಾ ಹಾಗೂ ಭದ್ರಾ ಜಲಾಶಯಗಳ ನೀರು ಬಳಕೆದಾರರ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿದರು.
ಭದ್ರಾವತಿಯ ಬಿಆರ್‌ಪಿ ಭದ್ರಾ ಮೇಲ್ದಂಡೆ ಎಂಜಿನಿಯರ್‌ ಕಚೇರಿ ಎದುರು ಸೋಮವಾರ ನಡೆದ ತುಂಗಾ ಹಾಗೂ ಭದ್ರಾ ಜಲಾಶಯಗಳ ನೀರು ಬಳಕೆದಾರರ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿದರು.   

ಭದ್ರಾವತಿ: ‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಪರಿಗಣಿಸಬೇಕು. ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.

ಇಲ್ಲಿನ ಬಿಆರ್‌ಪಿ ಭದ್ರಾ ಮೇಲ್ದಂಡೆ ಎಂಜಿನಿಯರ್ ಕಚೇರಿ ಎದುರು ಸೋಮವಾರ ನಡೆದ ಭದ್ರಾ ಮತ್ತು ತುಂಗಾ ನೀರು ಬಳಕೆದಾರರ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ದಶಕದ ಹಿಂದೆ ಆರಂಭವಾದ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ನಿಟ್ಟಿನಲ್ಲಿ ತುರ್ತು ಕ್ರಮ ಜರುಗಿಸಿ. ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು. ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ಶೀಘ್ರ ನೀರು ಹರಿಸಿ, ಈ ಭಾಗದ ರೈತರ ಆತಂಕ ನಿವಾರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಭಾರತ ಸರ್ಕಾರದ ನೀರು ಉಳಿತಾಯ ಮತ್ತು ಸುಧಾರಿತ ನೀರು ಬಳಕೆ ವಿಧಾನವನ್ನು ರೂಪಿಸಿ ರಾಜ್ಯದ ಪಶ್ಚಿಮ ಘಟ್ಟಗಳ ಜಿಲ್ಲೆಯಲ್ಲಿ ಸುರಿಯುವ ಮಳೆ ನೀರನ್ನು ರಕ್ಷಿಸಿ ರೈತರ ಜಮೀನಿಗೆ ಹರಿಸುವ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು. ಜಲಾಶಯ ಭಾಗದಲ್ಲಿ ಸೌರ ವಿದ್ಯುತ್ ಯೋಜನೆ ರೂಪಿಸಿ ರೈತರ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಭೆಗೂ ಮುನ್ನ ರೈತರ ಪಾದಯಾತ್ರೆ ಪಟ್ಟಣದ ಜಂಕ್ಷನ್‌ನಿಂದ ನೀರಾವರಿ ಇಲಾಖೆ ಕಚೇರಿವರೆಗೆ ಸಾಗಿತು.

ಸಭೆಯಲ್ಲಿ ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಶಿವಕುಮಾರ್, ತಿಪ್ಪೇಸ್ವಾಮಿ, ಶಂಭಣ್ಣ, ಪುಟ್ಟಪ್ಪ, ಯಶವಂತರಾವ್ ಘೋರ್ಪಡೆ, ವೀರೇಶ್ ಇದ್ದರು.

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಭಾಗದ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.