ಗಾಜನೂರಿನ ತುಂಗಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಕೊಂಡೊಯ್ಯಲು ಕೆ.ಕಣಬೂರು ಬಳಿ ನಿರ್ಮಿಸಿರುವ ಇಂಟೇಕ್ ಕೆನಾಲ್
ಶಿವಮೊಗ್ಗ: ಭದ್ರಾ ಮೇಲ್ದಂಡೆ ಯೋಜನೆ ಅಡಿ ಗಾಜನೂರಿನ ತುಂಗಾ ಜಲಾಶಯದಿಂದ ನಾಲೆಯ ಮೂಲಕ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ 17.4 ಟಿಎಂಸಿ ಅಡಿ ನೀರು ಹರಿಸುವ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದೆ. ಬೇಸಿಗೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು (ಟ್ರಯಲ್ ರನ್) ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎನ್‌ಎಲ್) ಸಿದ್ಧತೆ ನಡೆಸಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಮುತ್ತಿನಕೊಪ್ಪ ಬಳಿ ತುಂಗಾ ಜಲಾಶಯದ ಹಿನ್ನೀರನ್ನು ಆರಂಭದಲ್ಲಿ ಗುರುತ್ವ ಬಲ, ನಂತರ ಪಂಪ್ ಮಾಡಿ ನಾಲೆಗೆ ಹರಿಸಿ, ಅಲ್ಲಿಂದ 11.2 ಕಿ.ಮೀ. ಅಂತರದ ನೆಲಗದ್ದೆಗೆ ಕೊಂಡೊಯ್ದು, ಗುರುತ್ವ ಕಾಲುವೆಯ ಮೂಲಕ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಇದಕ್ಕಾಗಿ ಕೆ.ಕಣಬೂರು, ಸಾತಕುಳಿ ಬಳಿ ಪಂಪ್‌ಹೌಸ್ ನಿರ್ಮಿಸಲಾಗಿದೆ.
‘ಕಣಬೂರು ಪಂಪ್‌ಹೌಸ್ ಪೂರ್ಣಗೊಂಡಿದೆ. ಸಾತಕುಳಿಯಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಪಂಪ್ ಅಳವಡಿಕೆ, ವಿದ್ಯುತ್ ಟವರ್ ಹಾಕುವ ಕೆಲಸವೂ ಮುಗಿದಿದೆ. ಈಗ ಪಂಪ್‌ಹೌಸ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆಯಿಂದ ಅನುಮತಿ ಹಾಗೂ ರೈಸಿಂಗ್ ಲೈನ್‌ನಲ್ಲಿ ಒಂದು ಪೈಪ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ’ ಎಂದು ವಿಜೆಎನ್‌ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎನ್.ಗೋವರ್ಧನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
15 ವರ್ಷಗಳ ಅವಧಿ: ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ ತುಂಗಾ ಹಿನ್ನೀರಿನಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಯೋಜನೆ, ₹ 324 ಕೋಟಿ ವೆಚ್ಚದ ಈ ಕಾಮಗಾರಿಗೆ 2008ರಲ್ಲಿ ಟೆಂಡರ್ ಕರೆಯಲಾಗಿತ್ತು. 2010ರಲ್ಲಿ ಕೆಲಸ ಆರಂಭವಾಗಿದೆ. ನಿಗದಿಯಂತೆ 2011ರಲ್ಲೇ ಕೆಲಸ ಮುಗಿಯಬೇಕಿತ್ತು. ಅರಣ್ಯ ಪ್ರದೇಶದಲ್ಲಿ ಕಾಮಗಾರಿಗೆ ಅನುಮತಿ, ಹಣ ಬಿಡುಗಡೆಗೆ ವಿಳಂಬದ ಕಾರಣ ಆಗಲಿಲ್ಲ. ಜೂನ್ 2020ರ ನಂತರ ಕಾಮಗಾರಿ ವೇಗ ಪಡೆದಿದ್ದು, ಈಗ 15 ವರ್ಷಗಳ ನಂತರ ಯೋಜನೆ ಅಂತಿಮ ಹಂತ ತಲುಪಿದೆ.
ಭದ್ರಾ ಮೇಲ್ದಂಡೆ ಯೋಜನೆ ಜಾರಿ ಭಾಗವಾಗಿ 2019ರಿಂದ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ
ಭದ್ರಾ ಜಲಾಶಯದಿಂದ ಬೇಸಿಗೆಯಲ್ಲಿ ಮೂರು ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ.
ತುಂಗೆಯ ಪಾಲೇ ಅಧಿಕ!
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ಬಯಲು ಸೀಮೆಯ 2,25,515 ಹೆಕ್ಟೇರ್ ಪ್ರದೇಶಕ್ಕೆ ಕಾಲುವೆ, ಕೆರೆ ಹಾಗೂ ಹನಿ ನೀರಾವರಿ ಮೂಲಕ 29.9 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ.
ಅದಕ್ಕೆ ಭದ್ರಾ ನದಿಯಿಂದ 12.5 ಟಿಎಂಸಿ ಅಡಿ ಹಾಗೂ ತುಂಗಾದಿಂದ 17.4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಹೆಸರು ಭದ್ರಾ ಮೇಲ್ದಂಡೆ ಆದರೂ ಯೋಜನೆಗೆ ತುಂಗಾ ನದಿಯ ನೀರಿನ ಪಾಲು ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.