ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್) ಪೋರ್ಟಲ್‌ನ ತಾಂತ್ರಿಕ ಸಮಸ್ಯೆಯ ಕಾರಣದಿಂದ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಲವು ಪದವಿ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.
ಇದರಿಂದಾಗಿ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ 8 ತಿಂಗಳಿಂದ ಕಾಯುತ್ತಿದ್ದಾರೆ. ಆದರೂ ವಿಶ್ವವಿದ್ಯಾಲಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ.
ಪದವಿ ವಿದ್ಯಾರ್ಥಿಗಳ 2022–23ನೇ ಸಾಲಿನ 3ನೇ ಸೆಮಿಷ್ಟರ್ ಪರೀಕ್ಷೆ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಫಲಿತಾಂಶ ಜೂನ್ ತಿಂಗಳಲ್ಲಿ ಪ್ರಕಟವಾಗಿದೆ. ಆದರೆ, ಕೆಲವು ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್ ತಂತ್ರಾಂಶದಲ್ಲಿ ಹಾಜರಾತಿ ಕೊರತೆ ಕಾರಣ ನೀಡಿ ‘ಗೈರು’ ಎಂದು ಫಲಿತಾಂಶ ಪ್ರಕಟಿಸಲಾಗಿದೆ. ಎಲ್ಲಾ ವಿವರ ಸಮರ್ಪಕವಾಗಿದ್ದರೂ ಫಲಿತಾಂಶ ತಡೆಹಿಡಿಯಲಾಗಿದ್ದು, ಮೊದಲ ಸೆಮಿಸ್ಟರ್ ಫಲಿತಾಂಶದಲ್ಲಿಯೂ ಇದೇ ಸಮಸ್ಯೆ ಕಾಡಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ನೂತನ ಶಿಕ್ಷಣ ನೀತಿ (ಎನ್ಇಪಿ)ಯಲ್ಲಿ ಕಾಲೇಜು ಆಡಳಿತದಿಂದ ವಿದ್ಯಾರ್ಥಿಗಳಿಗೆ 40 ಅಂಕ ನೀಡಬಹುದು. ಅದರಲ್ಲಿ ಸೆಮಿನಾರ್, ಹಾಜರಾತಿ, ಅಸೈನ್‌ಮೆಂಟ್ ಹಾಗೂ ಆಂತರಿಕ ಪರೀಕ್ಷೆಗಳು ಒಳಗೊಂಡಿದೆ. ಆದರೆ, ಕೆಲವು ವಿದ್ಯಾರ್ಥಿಗಳು ಈ ಎಲ್ಲಾ ಚಟುವಟಿಕೆಗಳಲ್ಲಿಯೂ ಅರ್ಹರಾಗಿದ್ದಾರೆ. ಕಾಲೇಜು ಆಡಳಿತದಿಂದಲೂ ಮಕ್ಕಳ ಸಮರ್ಪಕ ಮಾಹಿತಿ ನೀಡಲಾಗಿದೆ. ಆದರೂ ಅವರ ಫಲಿತಾಂಶ ತಡೆಹಿಡಿಯಲಾಗಿದೆ.
‘ಮಾರ್ಚ್ ತಿಂಗಳಲ್ಲಿ 3ನೇ ಸೆಮಿಸ್ಟರ್‌ನ ಸಂಸ್ಕೃತ ಭಾಷಾ ಪರೀಕ್ಷೆ ಬರೆದಿದ್ದೇನೆ. 40 ಅಂಕಗಳ ಆಂತರಿಕ ಪರೀಕ್ಷೆಯಲ್ಲಿ 36 ಅಂಕ ಪಡೆದಿದ್ದೇನೆ. ಆದರೆ, ಯುಯುಸಿಎಂಎಸ್ ತಂತ್ರಾಂಶದಲ್ಲಿ ಈ ಅಂಕಗಳನ್ನು ಮಾತ್ರ ನಮೂದಿಸಲಾಗಿದೆ. ಲಿಖಿತ ಪರೀಕ್ಷೆಯ ಅಂಕ ದಾಖಲಾಗಿಲ್ಲ. ಮೂರು ಬಾರಿ ಆಡಳಿತಕ್ಕೆ ಪತ್ರ ಬರೆದು ಮನವಿ ಮಾಡಿದ್ದೇನೆ. ಸಮಸ್ಯೆ ಬಗೆಹರಿದಿಲ್ಲ’ ಎಂದು ವಿದ್ಯಾರ್ಥಿ ಇ.ಎಚ್.ಆಕಾಶ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ತಂತ್ರಾಂಶದಲ್ಲಿ ಗೊಂದಲ: ಕಾಲೇಜು ಆಡಳಿತದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸುವಾಗ ಕೆಲವರ ದಾಖಲಾತಿ ವಿವರ ಹಾಗೂ ಹೆಸರು ತೋರಿಸುವುದಿಲ್ಲ. ಇದರಿಂದಾಗಿ ನಮ್ಮಲ್ಲಿ ಗೊಂದಲ ಉಂಟಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಶೇ 60ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ನೇರ ಪರೀಕ್ಷೆ ಬರೆಯಲು ಬರುತ್ತಾರೆ. ಅವರು ಆಂತರಿಕ ಪರೀಕ್ಷೆ ಸೇರಿದಂತೆ ಎಲ್ಲಾ ಚಟುವಟಿಕೆಯಲ್ಲಿ ಮುಂದಿರುತ್ತಾರೆ. ಹಾಜರಾತಿ ಕಡಿಮೆ ಇರುವ ಕಾರಣ ಎನ್ಇಪಿ ಅನುಸಾರ ಅವರನ್ನು ನಪಾಸ್ ಮಾಡಲು ಅವಕಾಶವಿದೆ. ಆದರೆ, ಕಾಲೇಜು ಫಲಿತಾಂಶ ಕುಸಿಯುತ್ತದೆ. ತಂತ್ರಾಂಶದಲ್ಲಿ ಪ್ರತಿ ವಿದ್ಯಾರ್ಥಿಗೆ ಶೇ 75ರಷ್ಟು ಹಾಜರಾತಿ ನಮೂದಿಸಿದರೆ ಮಾತ್ರ ಉಳಿದ ಮಾಹಿತಿ ದಾಖಲಿಸಲು ಸಾಧ್ಯ. ಇದು ಕಾಲೇಜು ಆಡಳಿತದವರಿಗೆ ಸಮಸ್ಯೆ ತಂದೊಡ್ಡಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿವೇತನಕ್ಕೆ ಅಡ್ಡಿ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನೇಕ ಬಾರಿ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಲಾಗಿದೆ. ಈ ಸಮಸ್ಯೆಯಿಂದ ವಿದ್ಯಾರ್ಥಿ ವೇತನ ಹಾಗೂ ಅಂಕಪಟ್ಟಿ ಪಡೆಯಲು ಸಮಸ್ಯೆ ಆಗಲಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅದೇ ರೀತಿ ಕಾಲೇಜು ಆಡಳಿತದಿಂದ ಆದ ಸಮಸ್ಯೆ ಪರಿಹರಿಸಿಕೊಳ್ಳಲು ವಿಶ್ವವಿದ್ಯಾಲಯದಿಂದ ಕಾಲೇಜು ಆಡಳಿತಕ್ಕೆ ಯಾವುದೇ ನೋಟಿಸ್ ನೀಡುತ್ತಿಲ್ಲ. ಇದರಿಂದ ಗೊಂದಲ ಉಂಟಾಗಿದೆ ಎಂದು ಸ್ಥಳೀಯ ಕಾಲೇಜಿನ ಸಿಬ್ಬಂದಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.