ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮಾರುಕಟ್ಟೆಯಲ್ಲಿ ಬಾಳೆದಿಂಡು ವ್ಯಾಪಾರ ಜೋರಾಗಿ ನಡೆಯಿತು
ಶಿವಮೊಗ್ಗ: ಶ್ರಾವಣಮಾಸದ ಎರಡನೇ ಶುಕ್ರವಾರದ ವರಮಹಾಲಕ್ಷ್ಮಿ ಪೂಜೆ ಅಂಗವಾಗಿ ಗುರುವಾರ ನಗರ ಸೇರಿ ಜಿಲ್ಲೆಯಾದ್ಯಂತ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ಇಲ್ಲಿನ ಗಾಂಧಿ ಬಜಾರ್, ದುರ್ಗಿಗುಡಿ, ಹೂವಿನ ಮಾರುಕಟ್ಟೆಯಲ್ಲಿ ಜನರು ಪೂಜಾ ಸಾಮಗ್ರಿಗಳ ಜತೆಗೆ ಹೂವು, ಹಣ್ಣು, ಮಾವಿನ ಎಲೆ, ಬಾಳೆದಿಂಡು, ಲಕ್ಷ್ಮಿ ವಿಗ್ರಹದ ಮುಖವಾಡಗಳನ್ನು ಚೌಕಾಸಿ ಮಾಡಿ ಖರೀದಿಸುತ್ತಿದ್ದದ್ದು ಕಂಡುಬಂತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೂ, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡರೂ ಗ್ರಾಹಕರ ಖರೀದಿ ಉತ್ಸಾಹ ಕುಗ್ಗಿರಲಿಲ್ಲ. ಕಳೆದ ವಾರಕ್ಕೆ ಹೋಲಿಸಿದರೆ ಹೂ, ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕೈ ಸುಡುವಂತೆ ಮಾಡಿದೆ.
ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಅಷ್ಟ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯನ್ನು ಜನ ಹೊಂದಿದ್ದು, ಹಬ್ಬಕ್ಕೆ ಎಲ್ಲೆಡೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮಹಿಳೆಯರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.