ADVERTISEMENT

ಎಲ್ಲರ ಒಳಿತು ಬಯಸುವ ವೀರಶೈವ ಲಿಂಗಾಯತ ಸಮುದಾಯ

ಭದ್ರಾವತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 3:02 IST
Last Updated 24 ಜುಲೈ 2025, 3:02 IST
ಭದ್ರಾವತಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಸಿದ್ದಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಭದ್ರಾವತಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಸಿದ್ದಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು   

ಭದ್ರಾವತಿ: ‘ವೀರಶೈವ ಲಿಂಗಾಯತ ಸಮುದಾಯ ಯಾವುದೇ ಸಮಾಜಕ್ಕೆ ಅನ್ಯಾಯ ಮಾಡುವುದಿಲ್ಲ. ಎಲ್ಲರಿಗೂ ಒಳಿತನ್ನು ಬಯಸುವ ಸಮುದಾಯ ನಮ್ಮದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಭದ್ರಾವತಿ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಬಸವೇಶ್ವರ ಸಭಾ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಗೆ ಗೌರವ ಮತ್ತು ಜನ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ದಾವಣಗೆರೆಯಲ್ಲಿ ಎರಡು ದಿನ ಪಂಚ ಪೀಠಾಧಿಪತಿಗಳು ಸೇರಿ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ನಡೆಸಿ, ನಮ್ಮ ಸಮುದಾಯ ಗಟ್ಟಿಯಾಗಿದೆ‌. ಒಗ್ಗಟ್ಟಾಗಿದೆ ಎನ್ನುವ ಸಂದೇಶವನ್ನು ಇಡೀ ದೇಶಕ್ಕೆ ಕೊಟ್ಟಿದ್ದಾರೆ’ ಎಂದರು. ‌

ADVERTISEMENT

‘ನಾನೂ ಎಂದಿಗೂ ಸಮದಾಯದ ಜೊತೆಗೆ ಇದ್ದೇನೆ. ಗುರುಗಳು ನೀಡುವ ಮಾರ್ಗದರ್ಶನದಂತೆ ನಡೆಯುತ್ತಿದ್ದೇನೆ. ಸಮಾಜಕ್ಕಾಗಿ ಎಲ್ಲ ರೀತಿಯ ಕೆಲಸ ಮಾಡಲು ಸದಾ ಸಿದ್ಧಳಿದ್ದೇನೆ. ನಾವೆಲ್ಲರೂ ಒಂದು ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವರು ವೀರಶೈವ ಲಿಂಗಾಯತರು’ ಎಂದು ಹೇಳಿದರು.

ಬಸವ ತತ್ವದಡಿ ಸರ್ಕಾರದ ಕಾರ್ಯ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಸವ ತತ್ವಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣ ಅವರನ್ನು ರಾಜ್ಯ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಸಾಮಾಜಿಕ ನ್ಯಾಯ ನೀಡುವುದೇ ಸರ್ಕಾರದ ಮೂಲ ಉದ್ದೇಶ ಎಂದು ಅವರು ಪ್ರತಿಪಾದಿಸಿದರು. 

‘ಸಮಾಜದ ಮಕ್ಕಳು ಕೇವಲ ಎಂಜಿನಿಯರಿಂಗ್, ವೈದ್ಯಕೀಯ ಪದವಿ ಪಡೆಯಬೇಕು ಎಂಬ ಮನೋಭಾವದಿಂದ ಹೊರಬಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು. ಸಮಾಜದ ಹೆಚ್ಚು ಮಕ್ಕಳು ಐಎಎಸ್‌, ಐಪಿಎಸ್ ಅಧಿಕಾರಿಗಳಾಗಬೇಕು. ಇದೇ ನನ್ನ ಹೆಬ್ಬಯಕೆ ಹಾಗೂ ಹಾರೈಕೆ’ ಎಂದು ತಿಳಿಸಿದರು. 

ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಭದ್ರಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ವಿಜಯ್ ಕುಮಾರ್, ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಶಾಸಕ ಬಿ.ಕೆ.ಸಂಗಮೇಶ್ವರ, ನಗರಸಭೆ ಅಧ್ಯಕ್ಷೆ ಗೀತಾ ರಾಜ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಉಪಸ್ಥಿತರಿದ್ದರು.

ಎಂದಿಗೂ ಅನ್ಯಾಯ ಸಹಿಸಲ್ಲ: ವೀರಶೈವ ಲಿಂಗಾಯತ ಸಮುದಾಯದವರು ಅನ್ಯಾಯವನ್ನು ಎಂದಿಗೂ ಸಹಿಸುವುದಿಲ್ಲ.‌ ಪ್ರಸ್ತುತ ಜಾತಿ ಗಣತಿ ವಿಷಯದಲ್ಲಿ ಸಹ ನಮ್ಮ ಸಮಾಜಕ್ಕೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ನಮ್ಮ ಸಮುದಾಯದ 7 ಸಚಿವರು ಸೇರಿ ಲಿಖಿತ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆವು. 10 ವರ್ಷಗಳ ಹಿಂದೆ ಮಾಡಿದ್ದ ಜಾತಿ ಗಣತಿ ಸೂಕ್ತ ರೀತಿಯಲ್ಲಿ ಇಲ್ಲದ ಕಾರಣ ಇದೀಗ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮಸ್ಯೆಗಳ ಬಗ್ಗೆ ಸಂಪೂರ್ಣ ಹೊಸದಾಗಿ ಸಮೀಕ್ಷೆ ನಡೆಯುತ್ತಿದೆ. ನಮ್ಮ ಸಮುದಯಕ್ಕೆ ಅನ್ಯಾಯವಾಗಲು  ನಾವು ಬಿಡುವುದಿಲ್ಲ ಹಾಗೆಯೇ ಬೇರೆ ಸಮಾಜಕ್ಕೂ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ’ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌ ‘ವೀರಶೈವ ಲಿಂಗಾಯತ ಸಮುದಾಯದವರು ಒಂದು ರೊಟ್ಟಿಯನ್ನು ಎಲ್ಲರಿಗೂ ಹಂಚಿ‌ ತಿನ್ನುವ ಮನೋಭಾವದವರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.