
ಶಿವಮೊಗ್ಗ: ಠಾಣೆಗೆ ಹೋದಾಗ ದೂರು ಸ್ವೀಕರಿಸದಿದ್ದರೆ, ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಇದ್ದರೆ, ಇಲ್ಲವೇ ತುರ್ತು ಸಂದರ್ಭದಲ್ಲಿ ಪೊಲೀಸರ ನೆರವು ಬೇಕಿದ್ದರೆ ಇನ್ನು ಮುಂದೆ ಜಿಲ್ಲೆಯ ಜನರು`ಪಬ್ಲಿಕ್ ಐ’ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್ ಸಂಪರ್ಕಿಸಬಹುದು.
ಜಿಲ್ಲೆಗೆ ಹೊಸದಾಗಿ ಪೊಲೀಸ್ ವರಿಷ್ಠಾಧಿಕಾರಿ ಆಗಿ ಬಂದಿರುವ ಬಿ.ನಿಖಿಲ್, ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕಕ್ಕಾಗಿ ‘ಪಬ್ಲಿಕ್ ಐ’ ಆರಂಭಿಸುವ ತಮ್ಮ ಕನಸನ್ನು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟರು. ವಾರದೊಳಗೆ ವಾಟ್ಸ್ ಆ್ಯಪ್ ಸಂಖ್ಯೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು. ಆ ಗುಂಪಿನಲ್ಲಿ ಸಂಬಂಧಿಸಿದವರು ತಮ್ಮ ಕುಂದು–ಕೊರತೆಗಳನ್ನು ಹಂಚಿಕೊಳ್ಳಬಹುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಆದ್ಯತೆ ಎಂದು ಒತ್ತಿ ಹೇಳಿದ ನಿಖಿಲ್, ಮಹಿಳೆಯರು, ಮಕ್ಕಳ ಮೇಲಿನ ಅಪರಾಧ ತಡೆಗಟ್ಟುವಿಕೆ, ಠಾಣೆಗೆ ಬಂದ ಸಂತ್ರಸ್ತರನ್ನು ಗೌರವ ಪೂರಕವಾಗಿ ನಡೆಸಿಕೊಂಡು ಅವರಿಗೆ ನೆರವಾಗುವ ‘ಸಂತ್ರಸ್ತರ ಕೇಂದ್ರಿತ ಪೊಲೀಸಿಂಗ್’ಗೆ ಆದ್ಯತೆ ನೀಡುವುದಾಗಿ ತಿಳಿಸಿದರು. ಜೊತೆಗೆ ಮಲೆನಾಡಿಗೆ ಕಪ್ಪುಚುಕ್ಕೆ ಆಗಿ ಪರಿಣಮಿಸಿರುವ ಗಾಂಜಾ, ಡ್ರಗ್ಸ್, ಇಸ್ಪೀಟ್ ಹಾಗೂ ಓಸಿ ದಂಧೆಗಳಿಗೆ ಪೂರ್ಣವಿರಾಮ ಹಾಕಿ ‘ನಶೆ ಮುಕ್ತ ಶಿವಮೊಗ್ಗ’ ರೂಪಿಸುವ ಮಾತು ಆಡಿದರು.
ಜಿಲ್ಲೆಯ ಪ್ರತಿ ತಾಲ್ಲೂಕಿಗೂ ಅದರದೇ ಆದ ವೈವಿಧ್ಯತೆ ಇದೆ. ಅದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಶನಿವಾರದಿಂದ ಪ್ರತೀ ಠಾಣೆಗೂ ಭೇಟಿ ನೀಡುತ್ತೇನೆ ಎಂದು ಹೇಳಿದ ಅವರು, ಅಪರಾಧಿಗಳೊಂದಿಗೆ ಪೊಲೀಸರು ಕೈ ಜೋಡಿಸುವುದನ್ನು ಸಹಿಸುವುದಿಲ್ಲ. ಅಂತಹವರು ಕಂಡುಬಂದರೆ ಇಲಾಖೆಯಿಂದ ಶಿಸ್ತುಕ್ರಮ ಮಾತ್ರವಲ್ಲ, ಕಾನೂನು ಕ್ರಮಕ್ಕೂ ಒಳಪಡಿಸುವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಯುವಪೀಳಿಗೆಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅದರ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಅದಕ್ಕಾಗಿಯೇ ಶಾಲೆ–ಕಾಲೇಜುಗಳಲ್ಲಿ`ಸನ್ಮಿತ್ರ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸೈಬರ್ ಅಪರಾಧ ನಿಯಂತ್ರಣಕ್ಕೆ ಮತ್ತು ಜಾಗೃತಿಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು. ನಿರಂತರವಾಗಿ ‘ಆರಕ್ಷಕ ದಿನ’ ಆಚರಿಸಿ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು, ಕುಂದು-ಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವೆ ಎಂದರು.
‘ರಸ್ತೆ ಅಪಘಾತವಾಗಿ ಒಂದು ಜೀವ ಹೋದರೂ ಅದು ತುಂಬಲಾರದ ನಷ್ಟ. ಜೀವ ಉಳಿಸಲು ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಲಿದೆ. ಪೊಲೀಸರ ದಂಡಕ್ಕೆ ಹೆದರಿ ಹೆಲ್ಮೆಟ್ ಹಾಕಬೇಡಿ. ನಿಮ್ಮ ಮನೆಯಲ್ಲಿ ನಿಮ್ಮನ್ನು ಪ್ರೀತಿಸುವ ಜೀವಕ್ಕಾಗಿ ನೀವು ಹೆಲ್ಮೆಟ್ ಹಾಕಿಕೊಳ್ಳಿ’ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಎಸ್ಪಿಗಳಾದ ರಮೇಶ್, ಕಾರಿಯಪ್ಪ ಹಾಗೂ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಮೇಘಾ ಅಗರ್‌ವಾಲ್ ಉಪಸ್ಥಿತರಿದ್ದರು.
ಈ ಜಿಲ್ಲೆಗೆ ಎಸ್ಪಿಯಾಗಿ ನೇಮಕ ನನ್ನ ಭಾಗ್ಯ. ಸಾರ್ವಜನಿಕರು ಪೊಲೀಸರು ಒಟ್ಟಿಗೆ ಸೇರಿ ವಿಶ್ವಾಸದಿಂದ ಸಮಾಜ ಮುನ್ನಡೆಸೋಣ. ಕಾನೂನಿನ ಗೌರವ ಕೊಡುವವರಿಗೆ ಸದಾ ಗೌರವ ಕೊಡುತ್ತೇನೆ. ಒತ್ತಡ ಏನೇ ಇರಲಿ ಕಾನೂನಾತ್ಮಕವಾಗಿ ಕೆಲಸ ಮಾಡುವೆ.– ಬಿ.ನಿಖಿಲ್, ನೂತನ ಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.