ADVERTISEMENT

ಶಿಕಾರಿಪುರ | ಗ್ರಾಮದ ಪರಂಪರೆ: ವಿದ್ಯಾರ್ಥಿಗಳಿಂದಲೇ ಅಕ್ಷರರೂಪ

‘ನಮ್ಮ ಊರು ನಮ್ಮ ಬೇರು’; ದಸರಾ ರಜೆಯಲ್ಲಿ ಮಕ್ಕಳಿಗೊಂದು ರಚನಾತ್ಮಕ ಟಾಸ್ಕ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:54 IST
Last Updated 7 ಅಕ್ಟೋಬರ್ 2025, 4:54 IST
‘ನಮ್ಮ ಊರು ನಮ್ಮ ಬೇರು’ ಪುಸ್ತಕ ರಚನೆ ಅಂಗವಾಗಿ ಶಿಕಾರಿಪುರ ತಾಲ್ಲೂಕು ಗಾಮ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಪೂಜಾ ಪದ್ಧತಿ ಕುರಿತು ಮಕ್ಕಳು ಹಿರಿಯರಿಂದ ಮಾಹಿತಿ ಪಡೆದರು
‘ನಮ್ಮ ಊರು ನಮ್ಮ ಬೇರು’ ಪುಸ್ತಕ ರಚನೆ ಅಂಗವಾಗಿ ಶಿಕಾರಿಪುರ ತಾಲ್ಲೂಕು ಗಾಮ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಪೂಜಾ ಪದ್ಧತಿ ಕುರಿತು ಮಕ್ಕಳು ಹಿರಿಯರಿಂದ ಮಾಹಿತಿ ಪಡೆದರು   

ಶಿಕಾರಿಪುರ: ತಮ್ಮ ಗ್ರಾಮದ ಇತಿಹಾಸ, ಪರಂಪರೆ ಬಗ್ಗೆ ಅರಿಯುವ ಮೂಲಕ ಸ್ಥಳೀಯ ವಿದ್ಯಾರ್ಥಿಗಳು ಅದನ್ನು ಅಕ್ಷರ ರೂಪದಲ್ಲಿ ದಾಖಲಿಸುವ ನಿಟ್ಟಿನಲ್ಲಿ ‘ಪುಸ್ತಕ ರಚನೆ’ಯ ವಿಶೇಷ ಪ್ರಯತ್ನ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೂಲಕ ನಡೆಯುತ್ತಿದೆ.

ಗ್ರಾಮಕ್ಕೆ ಆ ಹೆಸರು ಯಾಕೆ ಬಂತು?, ಗ್ರಾಮದ ಪುರಾತನ ದೇವಸ್ಥಾನದ ಇತಿಹಾಸವೇನು?, ಗ್ರಾಮದಲ್ಲಿನ ಶಾಸನದ ಹಿನ್ನೆಲೆ ಏನು?, ಅದು ಹೇಳುವುದು ಏನನ್ನು? ಊರಿನ ಹಬ್ಬ ವೈಶಿಷ್ಟ್ಯ, ಆಹಾರ ಪದ್ಧತಿ, ಆಟ, ಜನಪದ ಕಲೆ, ಬೆಟ್ಟ, ಕೆರೆ, ಜೀವ ವೈವಿಧ್ಯ, ಜೀವನೋಪಾಯ, ಸಾಹಿತ್ಯ, ಸಂಸ್ಥೆಗಳು, ವೈದ್ಯ ಪದ್ಧತಿ, ಪ್ರಮುಖ ವ್ಯಕ್ತಿಗಳು...  ಹೀಗೆ ಗ್ರಾಮದ ಸಮಗ್ರತೆಯ ಕುರಿತು ಮಾಹಿತಿ ಕಲೆ ಹಾಕಿ ಪುಸ್ತಕ ರಚನೆ ಮಾಡುವುದು ‘ನಮ್ಮ ಊರು, ನಮ್ಮ ಬೇರು’ ಕಾರ್ಯಕ್ರಮದ ಪ್ರಮುಖ ಉದ್ದೇಶ.

ಅರಿವು ಕೇಂದ್ರದ ಗ್ರಂಥಪಾಲಕರು ಸ್ಥಳೀಯವಾದ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸಹಕಾರ, ಸಹಯೋಗದಲ್ಲಿ ಪುಸ್ತಕ ರಚಿಸಬೇಕು. ಸೆ. 22ರಿಂದ ಆರಂಭಗೊಂಡು ಅ.22ಕ್ಕೆ ಅಂತ್ಯಗೊಳ್ಳಬೇಕೆಂಬ ಸಮಯ ನಿಗದಿ ಮಾಡಲಾಗಿದೆ. ಈಗಾಗಲೇ ಪುಸ್ತಕ ರಚನೆ ಕಾರ್ಯ ಭರದಿಂದ ಸಾಗಿದೆ.

ADVERTISEMENT

ತಾಲ್ಲೂಕಿನ ಹಿತ್ತಲ ಗ್ರಾಮದ ವಿದ್ಯಾರ್ಥಿಗಳ ತಂಡ ಹಿರಿಯರಿರುವ ಮನೆಗಳಿಗೆ ತೆರಳಿ ಗ್ರಾಮದ ಇತಿಹಾಸ ತಿಳಿಯುವ ಕೆಲಸ ನಡೆಸಿದರೆ, ಮತ್ತೊಂದು ತಂಡ ಗ್ರಾಮದ ಬೆಟ್ಟ, ಕೆರೆ, ಕಟ್ಟೆಗಳಿಗೆ ಬಂದ ಹೆಸರು, ಇತಿಹಾಸ ಅರಿಯುವ ಕೆಲಸ ಮಾಡುತ್ತಿದ್ದಾರೆ. ಗಾಮಗ್ರಾಮಗಳಲ್ಲಿ ಹಿರಿಯರ ಮನೆಗಳಿಗೆ ತೆರಳುತ್ತಿರುವ ಮಕ್ಕಳು ದೇವಸ್ಥಾನದಲ್ಲಿ ನಡೆಯುವ ಪೂಜೆ, ಆಚರಣೆ, ಆ ದೇವಸ್ಥಾನದ ಇತಿಹಾಸ, ಪುರಾಣ, ದಂತ ಕಥೆ, ಶಾಸನ ಕುರಿತು ಅವರ ಅನುಭವವನ್ನು ಸಮಾಧಾನ ಚಿತ್ತದಿಂದ ಕೇಳುತ್ತಿದ್ದಾರೆ.

ಕಪ್ಪನಹಳ್ಳಿ, ಅಂಬಾರಗೊಪ್ಪ ಸೇರಿ ಹಲವೆಡೆ ಡೊಳ್ಳು ಕಲೆ ಅದರಲ್ಲಿನ ಜನಪದವನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಗ್ರಾಮಸ್ಥರ ಆಹಾರ ಪದ್ಧತಿ, ಹೆಚ್ಚು ರೂಢಿಯಲ್ಲಿರುವ ಗಾದೆ ಮಾತುಗಳು, ಲಾವಣಿ ಪದ, ಜೀವ ವೈವಿಧ್ಯ, ಬ್ಯಾಂಕ್, ಗ್ರಾ.ಪಂ. ಕಚೇರಿ, ಮಸೀದಿ, ಗುಡಿ ಕೈಗಾರಿಕೆ ಕುರಿತು ಎಲ್ಲ ಮಾಹಿತಿ ಪಡೆಯುವ ದೃಶ್ಯ ಸಾಮಾನ್ಯವಾಗಿದ್ದು, ಮಕ್ಕಳ ಪ್ರಯತ್ನ ಹಾಗೂ ಕುತೂಹಲ ಕಂಡು ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗ್ರಂಥಾಲಯಗಳ ಮೇಲ್ವಿಚಾರಕರಿಗೆ ತರಬೇತಿ

ರಜಾ ದಿನಗಳಲ್ಲಿ ಮಕ್ಕಳನ್ನು ಈ ರೀತಿ ರಚನಾತ್ಮಕ ಕಾರ್ಯದಲ್ಲಿ ತೊಡಗಿಸಲು ಶಿವಮೊಗ್ಗ ಜಿಲ್ಲೆ ಪ್ರಥಮವಾಗಿ ಇಂಥ ಸಾಹಸಕ್ಕೆ ಕೈ ಹಾಕಿದ್ದು, ಗ್ರಾಮ ಮತ್ತು ತಾಲ್ಲೂಕು ಮಟ್ಟದ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಈ ಬಗ್ಗೆ ತರಬೇತಿ ನೀಡಿ, ಮಕ್ಕಳಿಗೆ ತಿಳಿ ಹೇಳಿ, ಗ್ರಾಮದಲ್ಲಿ ಏನೇನು ಮಾಹಿತಿ ಸಂಗ್ರಹಿಸಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಕಾಯಕಕ್ಕೆ ಅಣಿಯಾಗುವಂತೆ ಮಾಡಲು ನಿರ್ದೇಶನ ನೀಡಲಾಗಿದೆ.

ಗ್ರಾಮದ ಹಿರಿಯರಿಂದ ವಿವರಣೆ ಪಡೆದು, ಅದನ್ನು ದಾಖಲಿಸಿ, ಹೆಚ್ಚಿನ ಮಾಹಿತಿ ಪಡೆದುಕೊಂಡು ಗ್ರಾಮದ ಮಹತ್ವದ ಸಂಗತಿಗಳ ಬಗ್ಗೆ ಸಮಗ್ರ ವಿವರಣೆಯನ್ನು ಎಲ್ಲರಿಗೂ ತಿಳಿಸುವುದು ಮುಖ್ಯ. ಮಕ್ಕಳ ವಿಚಾರ ಲಹರಿಯನ್ನು ಬೆಳೆಸುವುದು, ಗ್ರಾಮದ ಬಗ್ಗೆ ಮಕ್ಕಳಲ್ಲಿ ಪರಸ್ಪರ ಪ್ರೀತಿ, ಹೆಮ್ಮೆ ಮೂಡಿಸುವುದು ಈ ರಚನಾತ್ಮಕ ಕಾರ್ಯದ ಮೂಲ ಉದ್ಧೇಶಗಳಲ್ಲಿ ಒಂದಾಗಿದೆ ಎಂದು ಸಿಇಒ ಎನ್.ಹೇಮಂತ್ ಮಾಹಿತಿ ನೀಡಿದ್ದಾರೆ.

ಉತ್ತಮ ಪುಸ್ತಕ ರಚನೆಗೆ ಬಹುಮಾನ

‘ನಮ್ಮ ಊರು ನಮ್ಮ ಬೇರು' ಪುಸ್ತಕ ರಚನೆಯಲ್ಲಿ ಸ್ಪರ್ಧಾತ್ಮಕತೆ ಇರುವುದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಉತ್ತಮವಾಗಿ ಮೂಡಿಬರುವ 4 ಪುಸ್ತಕ ಆಯ್ಕೆ ಮಾಡಿ, ರಚಿಸಿದ ಮಕ್ಕಳಿಗೆ ಬಹುಮಾನ ನೀಡಲಾಗುವುದು. ಅದಕ್ಕಾಗಿ ತಾ.ಪಂ. ಇಒ, ಬಿಇಒ, ಸಮಾಜ ವಿಜ್ಞಾನ ವಿಷಯದ ಶಿಕ್ಷಕರು, ತಾ.ಪಂ. ಸಹಾಯಕ ನಿರ್ದೇಶಕರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಜಿ.ಪಂ. ವತಿಯಿಂದ ಉತ್ತಮ ಪುಸ್ತಕ ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್‌ ತಿಳಿಸಿದ್ದಾರೆ.

ಮಕ್ಕಳ ಪ್ರಯತ್ನ ಪ್ರಶಂಸನೀಯ

ಗ್ರಾಮದ ಇತಿಹಾಸವನ್ನು ಮಕ್ಕಳೇ ಸಂಗ್ರಹಿಸಿ ಅದಕ್ಕೊಂದು ಪುಸ್ತಕ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದೇ ಹೆಮ್ಮೆ. ಶಿವಮೊಗ್ಗ ಜಿ.ಪಂ. ರೂಪಿಸಿರುವ ಈ ಕಾರ್ಯ ಪ್ರಶಂಸನೀಯ. ಇತಿಹಾಸ, ಪರಂಪರೆ ಕುರಿತು ಯಾವುದೇ ಲೋಪ ಇಲ್ಲದೆ ದಾಖಲೀಕರಣ ಆಗುವಂತೆ ಗ್ರಾಮದ ಹಿರಿಯರು, ವಿದ್ಯಾವಂತರು ಗಮನ ನೀಡುವುದು ಸಮುದಾಯದ ಕರ್ತವ್ಯವಾಗಿದೆ.

–ಎಂ.ಎನ್. ರಾಮಚಂದ್ರ, ಎಂ.ಎನ್. ಪಿಕ್ಕಲ್ಸ್ ಮಾಲೀಕರು, ಶಿರಾಳಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.