ADVERTISEMENT

ಕೋಣಂದೂರು: ಬಿಎಸ್ಎನ್‌ಎಲ್‌ ನೆಟ್‌ವರ್ಕ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು!

ಹುಂಚಾದಲ್ಲಿ ಒಂದೂವರೆ ತಿಂಗಳಿನಿಂದ ಸೇವೆ ಸ್ಥಗಿತ; ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:49 IST
Last Updated 22 ಜನವರಿ 2026, 2:49 IST
ಹುಂಚಾದಲ್ಲಿ ಬಿಎಸ್ಎನ್‌ಎಲ್ ಸೇವೆ ಸ್ಥಗಿತಗೊಂಡಿದ್ದನ್ನು ಖಂಡಿಸಿ ‌ಗ್ರಾಮಸ್ಥರು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು
ಹುಂಚಾದಲ್ಲಿ ಬಿಎಸ್ಎನ್‌ಎಲ್ ಸೇವೆ ಸ್ಥಗಿತಗೊಂಡಿದ್ದನ್ನು ಖಂಡಿಸಿ ‌ಗ್ರಾಮಸ್ಥರು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು   

ಕೋಣಂದೂರು: ಪವಿತ್ರ ಯಾತ್ರಾ ಸ್ಥಳವಾದ ಹುಂಚಾದಲ್ಲಿ (ಹೊಂಬುಜ) ಒಂದೂವರೆ ತಿಂಗಳಿನಿಂದ ಬಿಎಸ್ಎನ್‌ಎಲ್ ಸೇವೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದ ಗ್ರಾಮಸ್ಥರು, ‘ಬಿಎಸ್ಎನ್‌ಎಲ್‌ಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಬ್ಯಾನರ್ ಅಳವಡಿಸಿ, ಮೌನಾಚರಣೆ ಮಾಡಿ ಬುಧವಾರ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

ಹುಂಚಾ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳ ಸಂಪರ್ಕ ಸೇತುವಾಗಿದ್ದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಾರ್ಯ ನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ‘ಬಿಎಸ್ ಎನ್‌ಎಲ್ ಹುಂಚಾದಲ್ಲಿ ಸತ್ತು ಹೋಗಿದೆ. ಅದಕ್ಕೆ ಶ್ರದ್ಧಾಂಜಲಿ ಹೇಳೋಣ’ ಎಂಬ ನಿರ್ಧಾರಕ್ಕೆ ಬಂದ ಗ್ರಾಮಸ್ಥರು, ವಿನೂತನ ರೀತಿಯಲ್ಲಿ ಪ್ರತಿಭಟಿಸಿ ಅಧಿಕಾರಿಗಳ ಗಮನ ಸೆಳೆದರು.

ಬಹುತೇಕ ಗ್ರಾಮೀಣರು ಬಿಎಸ್ಎನ್‌ಎಲ್ ಗ್ರಾಹಕರಾಗಿದ್ದು, ಪಡಿತರ ಪಡೆಯಲು ಹರಸಾಹಸ ಪಡುತ್ತಿರುವುದು ಸಾಮಾನ್ಯವಾಗಿದೆ. ತುರ್ತು ಸಂದರ್ಭದಲ್ಲಿ ನೆಟ್‌ವರ್ಕ್ ಇಲ್ಲದೆ ಅನೇಕ ಸಮಸ್ಯೆಗಳು ಎದುರಾಗಿವೆ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೂ ತೊಡಕಾಗಿದೆ. ಬ್ಯಾಂಕ್, ಅಂಚೆ ಕಚೇರಿ, ಕೃಷಿ, ಆಸ್ಪತ್ರೆಯ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

ADVERTISEMENT

ಅಧಿಕಾರಿಗಳನ್ನು ಶ್ರಮಪಟ್ಟು ಸಂಪರ್ಕಿಸಿದರೆ ಅವರಿಗೆ ಇಲ್ಲಿನ ಭಾಷೆ ತಿಳಿಯುವುದಿಲ್ಲ. ಯಾವುದೇ ರೀತಿಯಲ್ಲಿಯೂ ಸ್ಪಂದಿಸುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಪುಂಡಲೀಕ ಬಾಬು, ಬಿ.ಗುರುರಾಜ್, ಯದುಕುಮಾರ್, ಜಗದೀಶ, ಶ್ರೀಕಾಂತ್, ನಾಗರಾಜ್ ಬಿಲ್ಲೇಶ್ವರ, ಚಂದ್ರಕಾಂತ್, ಪೂರ್ಣಯ್ಯ ಇದ್ದರು.

ಹುಂಚಾದ ಬಿಎಸ್ಎನ್ ಎಲ್ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.