ADVERTISEMENT

ಮತಗಳ್ಳತನದ ವಿರುದ್ಧ ಜನಜಾಗೃತಿ: ವಿನಯಕುಮಾರ್ ಸೊರಕೆ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:44 IST
Last Updated 11 ಸೆಪ್ಟೆಂಬರ್ 2025, 4:44 IST
ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸನ್ಮಾನಿಸಿದರು
ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸನ್ಮಾನಿಸಿದರು   

ಶಿವಮೊಗ್ಗ: ಮತಗಳ್ಳತನದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವುದು ಎಐಸಿಸಿ ನಾಯಕ ರಾಹುಲ್‌ಗಾಂಧಿ ಹೋರಾಟಕ್ಕೆ ಸಿಕ್ಕಜಯ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.

‘ಮತಗಳ್ಳತನ ಕೇವಲ ಕರ್ನಾಟಕ, ಬಿಹಾರ ಅಥವಾ ಮಹಾರಾಷ್ಟ್ರಕ್ಕೆ ಮಾತ್ರ ಸಿಮೀತವಾಗಿಲ್ಲ. ಇಡೀ ದೇಶಕ್ಕೆ ವ್ಯಾಪಿಸಿದೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ವೇಳೆ 1 ಲಕ್ಷದಷ್ಟು ಇದ್ದ ಹೆಚ್ಚುವರಿ ಮತದಾರರ ಸಂಖ್ಯೆ ಲೋಕಸಭಾ ಚುನಾವಣೆ ವೇಳೆಗೆ ದುಪ್ಪಟ್ಟಾಗುತ್ತದೆ. ಇದು ಹೇಗೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ವಿಧಾನಸಭಾ ಚುನಾವಣೆ ವೇಳೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಪಕ್ಷದ ಚುನಾವಣಾ ವೀಕ್ಷಕನಾಗಿ ಹೋಗಿದ್ದೆ. ಆ ವೇಳೆ ಅಪಾರ್ಟ್‌ಮೆಂಟ್‌ವೊಂದಕ್ಕೆ ಹೋದರೆ ನಮ್ಮನ್ನು ಒಳಗೆ ಬಿಡಲಿಲ್ಲ. ಅಲ್ಲಿಯೇ ಅಧಿಕ ಮತಗಳು ಇದ್ದವು. ಅದನ್ನು ಗಮನಿಸಿದ್ದ ಎಐಸಿಸಿ ಅಧ್ಯಕ್ಷರು ಸತ್ಯ ಶೋಧನಾ ಸಮಿತಿ ರಚನೆ ಮಾಡಿ ಮತಗಳ್ಳತನದ ವರದಿ ತಯಾರಿಸಲು ಸೂಚಿಸಿದ್ದರು. ಆ ಪ್ರಕಾರ ನಾವು ಸತ್ಯ ಶೋಧನೆ ನಡೆಸಿ, ವರದಿ ತಯಾರಿಸಿ ಎಐಸಿಸಿಗೆ ಸಲ್ಲಿಸಿದ್ದೆವು ಎಂದರು.

ADVERTISEMENT

ಮತಗಳ್ಳತನ ವಿರುದ್ಧ ಜನಜಾಗೃತಿಗೆ ಕೆಪಿಸಿಸಿ ಪ್ರಚಾರ ಸಮಿತಿ ಈಗಾಗಲೇ ಎರಡು ಹಂತಗಳಲ್ಲಿ 17 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದೆ. ಈಗ ಮೂರನೇ ಹಂತದಲ್ಲಿ ಶಿವಮೊಗ್ಗದಿಂದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಸ ಹಮ್ಕಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಚುನಾವಣೆಗೋಸ್ಕರ ಇರುವ ಪಕ್ಷವಲ್ಲ. ಅದಕ್ಕೆ ತನ್ನದೇಯಾದ ತತ್ವ ಸಿದ್ಧಾಂತ ಇದೆ. ಈ ಸಿದ್ಧಾಂತದಡಿ ಪಕ್ಷವನ್ನು ಕಟ್ಟಲು ಈಗ ಪ್ರಚಾರ ಸಮಿತಿ ಕೆಲಸ ಮಾಡುತ್ತಿದೆ. ಹೀಗಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನು ಎಐಸಿಸಿ ನೇಮಕ ಮಾಡಿದೆ. ಹಾಗಾಗಿ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಕಟ್ಟುವುದಕ್ಕೆ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಕಾರ್ಯಕರ್ತರ ತರಬೇತಿ ಕಾರ್ಯಾಗಾರ ಹಾಗೂ ಸಮಾವೇಶಗಳ ಆಯೋಜಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ, ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಹೆಗ್ದೆ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಮುಖಂಡರಾದ ಎಚ್‌.ಸಿ. ಯೋಗೀಶ, ಕಲಗೋಡು ರತ್ನಾಕರ್, ಎಸ್.ಪಿ. ಶೇಷಾದ್ರಿ, ಇಕ್ಮೇರಿ ರಮೇಶ್, ಇಸ್ಮಾಯಿಲ್ ಖಾನ್, ಎಸ್.ಟಿ. ಹಾಲಪ್ಪ, ಆರ್. ರಾಜಶೇಖರ್, ಎಸ್.ಟಿ. ಚಂದ್ರಶೇಖರ್, ಯು. ಶಿವಾನಂದ್, ರಮೇಶ್ ಶಂಕರಘಟ್ಟ, ಕಲಿಂ ಪಾಷಾ, ಶಿವಕುಮಾರ್, ಹರ್ಷಿತ್ ಗೌಡ, ಚಿನ್ನಪ್ಪ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.