ಹೊಳೆಹೊನ್ನೂರು: ವಿಶಾಖಪಟ್ಟಣದಲ್ಲಿರುವ ಉಕ್ಕು ಕಾರ್ಖಾನೆಯನ್ನು ₹11,500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ ರೀತಿಯಲ್ಲೇ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಪುನಶ್ಚೇತನ ಮಾಡಲಿದೆ ಎಂದು ಜೆಡಿಎಸ್ ಯುವ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸಮೀಪದ ಮಲ್ಲಾಪುರದ ಗುಡ್ಡದ ಮಲ್ಲಾಪುರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಕಾರ್ಖಾನೆ ಪುನಶ್ಚೇತನಕ್ಕೆ ಡಿಪಿಆರ್ ತಯಾರಾಗಿದೆ. ಕಾರ್ಖಾನೆ ಅಭಿವೃದ್ಧಿಗೆ ಶೇ ನೂರರಷ್ಟು ಹಣ ಒದಗಿಸಲಾಗುತ್ತಿದೆ. ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಹಲವು ಬಾರಿ ಚರ್ಚಿಸಿದ್ದಾರೆ. ಇದು ಸಾಕಾರವಾದರೆ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಹಾಗೂ ಸರ್ ಎಂ. ವಿಶ‍್ವೇಶ‍್ವರಯ್ಯ ಹಾಗೂ ಮೈಸೂರು ರಾಜರು ಕಟ್ಟಿದ ಕಾರ್ಖಾನೆಯನ್ನು ಉಳಿಸಿದಂತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್‌ನ ಒಳಜಗಳದಿಂದ ಜನತೆ ಬೇಸತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. 2028ರಲ್ಲಿ ಜೆಡಿಎಸ್ ಪಕ್ಷ ಅತಿಹೆಚ್ಚು ಸ್ಥಾನ ಪಡೆದು ಎಲ್ಲ ಸವಾಲಿಗೂ ಉತ್ತರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಅಧಿಕಾರಕ್ಕೆ ಬಂದರೆ, ಇಲ್ಲಿನ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಹಳೇ ಮೈಸೂರಿಗೆ ಸೀಮಿತವಾದ ಪಕ್ಷ ಎಂಬುದಾಗಿ ಎದುರಾಳಿಗಳು ಹೇಳುತ್ತಾರೆ. ರಾಜ್ಯದಾದ್ಯಂತ ಪಕ್ಷವನ್ನ ಬಲಪಡಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಎಂಎಲ್‌ಸಿ ಭೋಜೇಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಶಾಸಕಿ ಶಾರದಾ ಪೂರ್ಯಾನಾಯ್ಕ ಅವರನ್ನ ಪಕ್ಷದಿಂದ ಕರೆದ್ಯೂಯಲು ಹಲವಾರು ಬಾರಿ ಪ್ರಯತ್ನ ಮಾಡಿದರು ಎಂದು ಸಚಿವರ ಹೆಸರು ಹೇಳದೇ ಟಾಂಗ್ ನೀಡಿದರು.
ಇದಕ್ಕೂ ಮುನ್ನ, ನಿಖಿಲ್ ಕುಮಾರಸ್ವಾಮಿ ಅವರನ್ನ ಅರಹತೊಳಲು ಕೈಮರದಿಂದ ಮಲ್ಲಾಪುರದ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ಕರೆತರಲಾಯಿತು.
ಜೆಡಿಎಸ್ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೀ ನಾಗಯ್ಯ, ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ದೇವದುರ್ಗ ಶಾಸಕಿ ಕರಿಯಮ್ಮ, ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ಕಾಂತರಾಜ್, ಎಪಿಎಂಸಿ ಮಾಜಿ ಸದಸ್ಯ ಸತೀಶ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಾರ್ಯಕರ್ತರ ಸಭೆಯಲ್ಲಿ ಗೊಂದಲ ಹಾಗೂ ಗದ್ದಲ
ವೇದಿಕೆಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಕಾರ್ಯಕರ್ತರು ‘ನಮ್ಮನ್ನು ಕಡೆಗಣಿಸಲಾಗುತ್ತಿದೆ. ಮುಂದೆ ಇರುವ ನೀವೇ ಎಲ್ಲಾ ಮಾಡಿದರೆ ನಾವೇಕೆ ಬರಬೇಕು’ ಎಂದು ಕೆಲ ಸಮಯ ವಾಗ್ವಾದ ನಡೆಸಿದ ಘಟನೆ ನಡೆಯಿತು. ವೇದಿಕೆಯಲ್ಲಿ ಗೊಂದಲ ಉಂಟಾಗಿದ್ದರಿಂದ ವೇದಿಕೆ ಕೆಳಗಿದ್ದ ಕಾರ್ಯಕರ್ತರೂ ವೇದಿಕೆ ಬಳಿ ಬಂದು ಗಲಾಟೆ ಮಾಡಲಾರಂಭಿಸಿದರು. ನಿಖಿಲ್ ಭಾಷಣದ ವೇಳೆ ವೇದಿಕೆಯಲ್ಲಿ ಕಾರ್ಯಕರ್ತರ ನೂಕು ನುಗ್ಗಲು ಉಂಟಾಯಿತು. ಹೀಗಾಗಿ ಅವರು 2 ನಿಮಿಷಗಳ ಭಾಷಣ ನಿಲ್ಲಿಸಿದರು. ಕಾರ್ಯಕರ್ತರು ದೂರಸರಿದ ನಂತರ ಮತ್ತೆ ಭಾಷಣ ಮುಂದುವರಿಸಿದರು. ನಿಖಿಲ್ ಅವರನ್ನು ನೋಡಲು ಬಂದಿದ್ದ ಕಾರ್ಯಕರ್ತರು ಅವರ ಭಾಷಣದ ವೇಳೆಯೇ ಸಭೆಯಿಂದ ಹೊರನಡೆದರು. ವೇದಿಕೆ ಮುಂಭಾಗದ ಬಹುತೇಕ ಕುರ್ಚಿಗಳು ಖಾಲಿಯಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.