ಶಿವಮೊಗ್ಗ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದ ಫಲವಾಗಿ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗೆ ಮರುಜೀವ ಬಂದಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಐಎಸ್‌ಎಲ್ ಕಾರ್ಖಾನೆ ಬಹುತೇಕ ಮುಚ್ಚುವ ಹಂತಕ್ಕೆ ಬಂದಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿಯೇ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು ನಮ್ಮ ಭಾಗ್ಯ. ಅವರ ಸತತ ಪ್ರಯತ್ನದಿಂದ ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ಒಪ್ಪಿಗೆ ನೀಡಿದೆ. ಅಲ್ಲದೆ, ಮೊದಲ ಕಂತಾಗಿ ₹10 ಸಾವಿರ ಕೋಟಿ ಬಿಡುಗಡೆ ಮಾಡಿದೆ ಎಂದರು.
ಈ ಹಣ ಸಾಕಾಗುವುದಿಲ್ಲ. ಇದಕ್ಕೆ ಮತ್ತಷ್ಟು ಹಣ ಬೇಕಾಗಿದೆ. ವಿಐಎಸ್‌ಎಲ್ ಕಾರ್ಖಾನೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಿದೆ. ಎಲ್ಲಾ ಹೊಸದಾದ ಆಧುನಿಕ ಯಂತ್ರಗಳು ಬೇಕಾಗುತ್ತದೆ. ತಂತ್ರಜ್ಞಾನ ಕೂಡ ಬದಲಾಗಬೇಕು. ಜಾಗಮಾತ್ರ ಇರುತ್ತದೆ. ಅಲ್ಲಿ ಹೊಸ ಕಾರ್ಖಾನೆಯೇ ನಿರ್ಮಾಣ ಮಾಡಬೇಕು. ಹೀಗಾಗಿ ಕಾರ್ಖಾನೆ ಹೊಸದಾಗಿ ನಿರ್ಮಾಣ ಮಾಡುವ ಎಲ್ಲಾ ಪ್ರಯತ್ನಗಳು ಈಗಾಗಲೇ ನಡೆದಿವೆ ಎಂದರು.
ಸಂಸದ ಬಿ.ವೈ. ರಾಘವೇದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಬಿ.ಕೆ. ಸಂಗಮೇಶ್ ಸೇರಿದಂತೆ ಕೆಲವು ಮಠಾಧೀಶರು ಕೂಡ ವಿಐಎಸ್‌ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ಪ್ರಯತ್ನಪಟ್ಟಿದ್ದಾರೆ. ಕೊನೆಗೆ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದಿಂದಾಗಿ ವಿಐಎಸ್‌ಎಲ್‌ಗೆ ಮರುಜೀವ ಬರುತ್ತಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮತ್ತು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಪ್ರಯತ್ನದಿಂದಾಗಿ ಭದ್ರಾವತಿ-ಚಿಕ್ಕಜಾಜೂರು ನಡುವೆ ರೈಲು ಹಳಿ ನಿರ್ಮಾಣಕ್ಕೆ ಈಗಾಗಲೇ ಅನುಮತಿ ಸಿಕ್ಕಿದೆ. ಇದರಿಂದ ವಿಐಎಸ್‌ಎಲ್‌ಗೆ ಅದಿರು ತರಲು ಅನುಕೂಲವಾಗುತ್ತದೆ ಎಂದರು.
ಪ್ರಮುಖರಾದ ಗೀತಾ ಸತೀಶ್, ದೀಪಕ್‌ಸಿಂಗ್, ಅಬ್ದುಲ್ ವಾಜೀದ್, ಉಮಾಶಂಕರ ಉಪಾಧ್ಯಾಯ, ಸಂಜಯ್ ಕಶ್ಯಪ್, ಜಯಣ್ಣ ಗೌಡ್ರು, ನಾಗೇಶ್, ಮಹೇಶ್, ಸಂಗಯ್ಯ, ರಮೇಶ್ ನಾಯ್ಕ, ಕಾಂತರಾಜ್, ಗೋಪಿ, ರಘು ಇದ್ದರು.
ಕಿಮೋ ಚಿಕಿತ್ಸೆಗೆ ಅವಕಾಶ ಕಲ್ಪಿಸಿ
ಕೆ.ಬಿ.ಪಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ ಕ್ಯಾನ್ಸರ್ ಪೀಡಿತರಿಗೆ ಕಿಮೋ ಚಿಕಿತ್ಸೆ ನೀಡಲು ರಾಜ್ಯದ 16 ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿರುವ ರಾಜ್ಯ ಸರ್ಕಾರ ಶಿವಮೊಗ್ಗವನ್ನು ಕೈಬಿಟ್ಟಿದೆ. ಇದರ ಹಿಂದೆ ರಾಜಕೀಯ ದ್ವೇಷ ಕೆಲಸ ಮಾಡಿದೆ ಎಂದು ಆರೋಪಿಸಿದರು. ಶಿವಮೊಗ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದರೂ ಅಲ್ಲಿ ಕಿಮೋ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು ಎಂಬುದು ಸರ್ಕಾರಕ್ಕೆ ನೆನಪಾಗಿಲ್ಲ. ಶಿವಮೊಗ್ಗದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಈ ಅನ್ಯಾಯ ಮಾಡಲಾಗಿದೆ. ರಾಜಕೀಯ ದ್ವೇಷ ಬಿಟ್ಟು ಕಿಮೋ ಚಿಕಿತ್ಸೆಗೆ ಇಲ್ಲಿಯೂ ಸರ್ಕಾರ ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.