ADVERTISEMENT

ನೀರಿನ ಕೊರತೆ: ಎರಡು ದಿನಕ್ಕೊಮ್ಮೆ ಸರಬರಾಜು

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 14:17 IST
Last Updated 7 ಜೂನ್ 2019, 14:17 IST

ಶಿವಮೊಗ್ಗ:ತುಂಗಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಪರಿಣಾಮ ಜೂನ್‌ 10ರಿಂದ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಿಗೆ ಎರಡು ದಿನಕೊಮ್ಮೆ ನೀರು ಸರಬರಾಜು ಮಾಡಲು ನಗರ ಪಾಲಿಕೆ ನಿರ್ಧರಿಸಿದೆ.

ನಗರಕ್ಕೆ ಸರಬರಾಜು ಮಾಡುವ ಹೆಚ್ಚಿನ ಪ್ರಮಾಣದ ನೀರನ್ನು ತುಂಗಾ ಜಲಾಶಯದಿಂದ ಪಂಪ್‌ ಮಾಡಲಾಗುತ್ತದೆ. ಸದ್ಯ ಜಲಾಶಯದಲ್ಲಿ 1.15 ಟಿಎಂಸಿ ಅಡಿ ನೀರಿದೆ. ನಗರದ 35 ವಾರ್ಡ್‌ಗಳಿಗೆ ಪೂರೈಸಲು ಪ್ರತಿ ದಿನ 0.2 ಟಿಎಂಸಿ ನೀರಿನ ಆವಶ್ಯಕತೆ ಇದೆ. ಈಗಿರುವ ನೀರು ಮಿತವಾಗಿ ಬಳಸಿದರೆ ಎರಡು ತಿಂಗಳು ನಿರ್ವಹಿಸಬಹುದು. ಒಂದು ವೇಳೆ ಮಳೆ ವಿಳಂಬವಾದರೆ ನೀರಿನ ಕೊರತೆ ಎದುರಾಗಬಹುದು. ಅದಕ್ಕಾಗಿ ಮಿತ ಬಳಕೆಗೆ ಅನಿವಾರ್ಯ ಎಂದು ಉಪ ಮೇಯರ್ ಎನ್‌.ಎಸ್.ಚನ್ನಬಸಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಸ್ಪತ್ರೆಗಳು, ಅಗ್ನಿ ಶಾಮಕ ಸೇವೆಗಳಿಗೆ ಹೊರತುಪಡಿಸಿ ಉಳಿದ ಎಲ್ಲೆಡೆ ಎರಡು ದಿನಕ್ಕೆ ಒಮ್ಮೆ ನೀರು ಹರಿಸಲಾಗುವುದು. ಬಡವರು, ಕೊಳೆಗೇರಿ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳು ಇರುವುದಿಲ್ಲ. ಅದಕ್ಕಾಗಿ ಆ ಪ್ರದೇಶಗಳಿಗೆ ನಿತ್ಯವೂ ಸ್ವಲ್ಪ ಸಮಯ ನೀರು ಬಿಡಲು ಸೂಚಿಸಲಾಗಿದೆ. ಜನರು ಸಹಕರಿಸಬೇಕು ಎಂದು ಕೋರಿದರು.

ADVERTISEMENT

ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಹರಿಸಬಾರದು. ನದಿಗೆ ನೀರು ಬಿಡಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಈಗ ಇರುವ ಸಂಗ್ರಹವನ್ನು ಸಂಪೂರ್ಣವಾಗಿ ಕುಡಿಯುವ ನೀರಿನ ಬಳಕೆಗೆ ಮೀಸಲಿಡಲು ಅಧಿಕಾರಿಗಳೂ ಒಪ್ಪಿಗೆ ನೀಡಿದ್ದಾರೆ. ಮಳೆ ಆರಂಭವಾದ ನಂತರ ಮೊದಲಿನಂತೆ ಪ್ರತಿ ದಿನವೂ ನೀರು ಪೂರೈಕೆ ಇರುತ್ತದೆ ಎಂದರು.

ಗಾಜನೂರು ಜಲಾಶಯದಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದೆ. ಜಿಲ್ಲಾಡಳಿತ, ನೀರಾವರಿ ಇಲಾಖೆ ಹೂಳು ತೆಗೆಸಿದರೆ ಹೆಚ್ಚಿನ ನೀರು ಸಂಗ್ರಹ ಸಾಧ್ಯವಾಗುತ್ತದೆ. ಭದ್ರಾ ಮೇಲ್ದಂಡೆ, ಹೊಸಪೇಟೆ ಜಲಾಶಯಕ್ಕೆ ನೀರು ಹರಿಸಿದರೂ, ಕುಡಿಯುವ ನೀರಿಗೆ ಇರುವ ಪ್ರಮಾಣಕ್ಕೆ ಧಕ್ಕೆಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಸಾರ್ವಜನಿಕರು ನೀರು ಪೋಲು ಮಾಡಬಾರದು. ಅಗತ್ಯ ಇರುವಷ್ಟು ನೀರು ಸಂಗ್ರಹಿಸಿದ ನಂತರ ವ್ಯರ್ಥವಾಗಿ ಹರಿದು ಹೋಗದಂತೆ ಕ್ರಮಕೈಗೊಳ್ಳಬೇಕು. ವಾಹನ ತೊಳೆಯಲು, ನೇರವಾಗಿ ಮರಗಿಡಗಳಿಗೆ ಬಿಡಲು ನೀರು ಬಳಸಬಾರದು. ಬಳಸಿದ ನೀರು ಗಿಡಮರಗಳಿಗೆ ಹರಿಯುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಲತಾ ಗಣೇಶ್, ಆಯುಕ್ತೆ ಚಾರುಲತಾ ಸೋಮಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.