ADVERTISEMENT

ಶಿವಮೊಗ್ಗ: ವಾರಕ್ಕೆ ಎಂಟು ಬಿಂದಿಗೆ ನೀರು, ಗ್ರಾಮೀಣರ ಕಣ್ಣೀರು!

ತೀವ್ರ ಬಾಯಾರಿವೆ ಅಗಸವಳ್ಳಿ ಪಂಚಾಯ್ತಿ ವ್ಯಾಪ್ತಿಯ ಐದು ಗ್ರಾಮಗಳು

ವೆಂಕಟೇಶ ಜಿ.ಎಚ್.
Published 21 ಮೇ 2025, 6:27 IST
Last Updated 21 ಮೇ 2025, 6:27 IST
ಶಿವಮೊಗ್ಗ ತಾಲ್ಲೂಕಿನ ರಾಮೇನಹಳ್ಳಿಯಲ್ಲಿ ಸೋಮವಾರ ಕಾರಿನಲ್ಲಿ ಕುಳಿತು ಶಾಸಕಿ ಶಾರದಾ ಪೂರ್ಯಾನಾಯ್ಕ ಅಗಸವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಜನರ ಕುಡಿಯುವ ನೀರಿನ ಬವಣೆ ಆಲಿಸಿದರು
ಶಿವಮೊಗ್ಗ ತಾಲ್ಲೂಕಿನ ರಾಮೇನಹಳ್ಳಿಯಲ್ಲಿ ಸೋಮವಾರ ಕಾರಿನಲ್ಲಿ ಕುಳಿತು ಶಾಸಕಿ ಶಾರದಾ ಪೂರ್ಯಾನಾಯ್ಕ ಅಗಸವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಜನರ ಕುಡಿಯುವ ನೀರಿನ ಬವಣೆ ಆಲಿಸಿದರು   

ಶಿವಮೊಗ್ಗ: ತುಂಗಾ– ಭದ್ರಾ ನದಿಗಳು ಕೂಗಳತೆಯ ದೂರದಲ್ಲಿ ಹರಿಯುತ್ತಿದ್ದರೂ ಶಿವಮೊಗ್ಗ ಗ್ರಾಮಾಂತರ ಭಾಗದ ಅಗಸವಳ್ಳಿ ದಿಬ್ಬ, ಗಾಂಧಿನಗರ, ಗೊಲ್ಲರ ಕ್ಯಾಂಪ್, ಚಾಮುಂಡೇಶ್ವರಿ ದೇವಸ್ಥಾನ ಕ್ಯಾಂಪ್ ಹಾಗೂ ಹೊಸೂರು ಗ್ರಾಮಗಳ ನಿವಾಸಿಗಳು ವಿಪರೀತ ಬಾಯಾರಿಕೆಯಿಂದ ಬಳಲುತ್ತಿದ್ದಾರೆ.

ಪಡಿತರದಂತೆ ನೀರು:

ಅಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮಗಳ ನಿವಾಸಿಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಅದೂ ಮನೆಗೆ ಎಂಟು ಬಿಂದಿಗೆ ನೀರು ಮಾತ್ರ!

ADVERTISEMENT

‘ಕಳೆದ ಬುಧವಾರ ಟ್ಯಾಂಕರ್‌ ಬಂದಿತ್ತು. ಮತ್ತೆ ಬಂದಿಲ್ಲ. ಟ್ಯಾಂಕರ್‌ನಲ್ಲಿ ಅರ್ಧ ಮಾತ್ರ ನೀರು ತರುತ್ತಾರೆ. ಅದು ಯಾರಿಗೆ ಸಾಲುತ್ತೆ. ವಾರಕ್ಕೆ ಎರಡು ಟ್ಯಾಂಕರ್ ಎಂದು ಹೇಳುತ್ತಾರೆ. ಆದರೆ ಎರಡೂ ಟ್ಯಾಂಕರ್ ಒಂದೊಂದು ಬೀದಿಗೆ ಖಾಲಿ ಆಗುತ್ತವೆ. ಕೆಲವರಿಗೆ ಐದು ಬಿಂದಿಗೆ ನೀರು ಸಿಕ್ಕರೂ ದೊಡ್ಡದು’ ಎಂದು ಅಗಸವಳ್ಳಿ ದಿಬ್ಬದ ನಿವಾಸಿ ಲಕ್ಷ್ಮೀ ಅಳಲು ತೋಡಿಕೊಳ್ಳುತ್ತಾರೆ.

ಶಾಶ್ವತ ನೀರಿನ ಮೂಲ ಇಲ್ಲ:

‘ಅಗಸವಳ್ಳಿ ಗ್ರಾಮ ಪಂಚಾಯ್ತಿಯ ಈ ಐದು ಜನವಸತಿ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ಮೂಲ ಇಲ್ಲ. ಬದಲಿಗೆ ಕೊಳವೆ ಬಾವಿ ಅವಲಂಬಿಸಿವೆ. ಬೇಸಿಗೆಯಲ್ಲಿ ಬೋರ್‌ವೆಲ್‌ಗಳು ಕೈ ಕೊಡುತ್ತವೆ. ಇದು ಸಮಸ್ಯೆಯ ಮೂಲ. ಅಗಸವಳ್ಳಿ ದಿಬ್ಬದಲ್ಲಿ ಎರಡು ಕೊಳವೆ ಬಾವಿ ಇವೆ. ಎರಡರಲ್ಲೂ ನೀರು ಬರುತ್ತಿಲ್ಲ. ಮಳೆಗಾಲದಲ್ಲಿ ರಿಚಾರ್ಜ್ ಆಗುತ್ತವೆ. ನಮಗೆ ಟ್ಯಾಂಕರ್ ಮೂಲಕ ನೀರು ಕೊಡುವುದೇ ಕೆಲಸ’ ಎಂದು ಅಗಸವಳ್ಳಿ ಗ್ರಾಪ ಪಂಚಾಯ್ತಿ ಸದಸ್ಯ ರಾಜಣ್ಣ ಹೇಳುತ್ತಾರೆ.

‘ಸದ್ಯ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನೀರು ಖರೀದಿಸಿ ಟ್ಯಾಂಕರ್ ಮೂಲಕ ತಂದು ಕೊಡುತ್ತಿದ್ದೇವೆ. ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ‘ ಎಂದು ತಿಳಿಸಿದರು.

‘ವಿಶೇಷವೆಂದರೆ ಇಲ್ಲಿನ ಬಹುತೇಕ ನಿವಾಸಿಗಳು ಕೂಲಿ ಕಾರ್ಮಿಕರು. ಶಿವಮೊಗ್ಗಕ್ಕೆ ಕೆಲಸಕ್ಕೆ ಹೋಗುತ್ತಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುವ ನಮಗೆ ಕುಡಿಯಲು ನೀರು ಹೊಂದಿಸುವುದೇ ದೊಡ್ಡ ಸವಾಲು. ಟ್ಯಾಂಕರ್ ಬರುವ ದಿನ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇರುತ್ತೇವೆ. ಮಕ್ಕಳು–ಮರಿ ಇದ್ದವರ ಪಾಡಂತೂ ಹೇಳತೀರದು’ ಎಂದು ಅಗಸವಳ್ಳಿ ದಿಬ್ಬದ ನಿವಾಸಿ ಎಸ್ತರ್ ಬೇಸರ ವ್ಯಕ್ತಪಡಿಸುತ್ತಾರೆ. ಜನರಿಗೆ ಕುಡಿಯಲು ನೀರು ಕೊಡಲು ಆಗದಷ್ಟು ತೊಂದರೆ ಏನೂ ಇಲ್ಲ. ಸಿಇಒ ಅವರಿಗೆ ತಕ್ಷಣ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ಕೊಟ್ಟು ಸಮಸ್ಯೆ ಪರಿಹಾರಕ್ಕೆ ಹೇಳುತ್ತೇನೆ.. ಎಸ್.ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ

ರಾಜಣ್ಣ
ಲಕ್ಷ್ಮೀ
ಮೇಘಾ
ಎಸ್.ಮಧು ಬಂಗಾರಪ್ಪ
ಜನರಿಗೆ ಕುಡಿಯಲು ನೀರು ಕೊಡಲು ಆಗದಷ್ಟು ತೊಂದರೆ ಏನೂ ಇಲ್ಲ. ಸಿಇಒ ಅವರಿಗೆ ತಕ್ಷಣ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ಕೊಟ್ಟು ಸಮಸ್ಯೆ ಪರಿಹಾರಕ್ಕೆ ಹೇಳುತ್ತೇನೆ..
ಎಸ್.ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
ನಮಗೆ ಊಟವಿಲ್ಲದಿದ್ದರೂ ಪರವಾಗಿಲ್ಲ. ಕುಡಿಯಲು ನೀರು ಬೇಕು ಎಂಬ ಕಾರಣಕ್ಕೆ ಕೆಲಸಕ್ಕೆ ಹೋಗದೇ ಕಾದು ಕುಳಿತು ನೀರು ಪಡೆಯುತ್ತೇವೆ. ವಾರಕ್ಕೆ ಎಂಟು ಬಿಂದಿಗೆ ಯಾವುದಕ್ಕೂ ಸಾಲುವುದಿಲ್ಲ.
ಮೇಘಾ ಅಗಸವಳ್ಳಿ ದಿಬ್ಬದ ನಿವಾಸಿ
ಅರ್ಧ ಟ್ಯಾಂಕರ್ ನೀರು ತರುತ್ತಾರೆ. ಅದು ಯಾರಿಗೂ ಸಾಲುವುದಿಲ್ಲ. 2 ಕಿ.ಮೀ ದೂರದ ಅಗಸವಳ್ಳಿಯಿಂದ ನೀರು ಒಯ್ಯುತ್ತೇವೆ. ಬಾವಿ ನೀರು ಬಳಸುತ್ತೇವೆ.
ಲಕ್ಷ್ಮೀ ಅಗಸವಳ್ಳಿ ದಿಬ್ಬದ ನಿವಾಸಿ
ಕೊಳವೆ ಬಾವಿ ಬತ್ತಿ ಹೋಗಿವೆ. ಪಂಚಾಯ್ತಿಯ ಬೇರೆ ಕೆಲಸ ಬಿಟ್ಟು ಜನರಿಗೆ ಕುಡಿಯುವ ನೀರು ಹೊಂದಿಸುವ ಕೆಲಸವನ್ನೇ ಮಾಡುತ್ತಿದ್ದೇನೆ. ಆದರೂ ನೀರು ಸಾಲುತ್ತಿಲ್ಲ..
ರಾಜಣ್ಣ ಅಗಸವಳ್ಳಿ ಗ್ರಾ.ಪಂ ಸದಸ್ಯ

ಸದ್ಯಕ್ಕೆ ಟ್ಯಾಂಕರ್ ನೀರು ಪರಿಹಾರ; ಶಾರದಾ ಪೂರ್ಯಾನಾಯ್ಕ ಅಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಬಹುಗ್ರಾಮ ಯೋಜನೆಯಡಿ ತುಂಗಾ ನದಿಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಈಗ ಗಾಜನೂರು ಬಳಿ ಅದಕ್ಕೆ ಜಾಕ್‌ವೆಲ್ ಸಿದ್ಧವಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷ ಬೇಕಿದೆ. ಆ ಭಾಗದಲ್ಲಿ ಬೋರ್‌ವೆಲ್‌ ಕೊರೆದೂ ನೀರು ಸಿಗುತ್ತಿಲ್ಲ. ನಾನೇ ಏಳು ಕೊರೆಸಿದ್ದೇನೆ. ಒಂದು ಬೋರ್‌ವೆಲ್‌ನಲ್ಲಿ ನೀರು ಸಿಕ್ಕರೂ ಅದು ಕುಡಿಯಲು ಯೋಗ್ಯವಿಲ್ಲ. ಹೀಗಾಗಿ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ನೀರು ಪೂರೈಕೆ ಪ್ರಮಾಣ ಹೆಚ್ಚಿಸುವುದು ಮಾತ್ರ ಪರಿಹಾರ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.