ADVERTISEMENT

ಹೊಸನಗರ ತಾಲ್ಲೂಕಿನ ಸಂಪಳ್ಳಿ ವೃತ್ತದಲ್ಲಿ ನಿರ್ಮಿಸಿರುವ ಪುನೀತ್ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 5:00 IST
Last Updated 8 ಜನವರಿ 2022, 5:00 IST
ಹೊಸನಗರ ತಾಲ್ಲೂಕು ಸಂಪಳ್ಳಿ ವೃತ್ತದಲ್ಲಿ ನಿರ್ಮಿಸಿರುವ ಪುನೀತ್ ಪುತ್ಥಳಿಯನ್ನು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಅನಾವರಣಗೊಳಿಸಿದರು.
ಹೊಸನಗರ ತಾಲ್ಲೂಕು ಸಂಪಳ್ಳಿ ವೃತ್ತದಲ್ಲಿ ನಿರ್ಮಿಸಿರುವ ಪುನೀತ್ ಪುತ್ಥಳಿಯನ್ನು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಅನಾವರಣಗೊಳಿಸಿದರು.   

ಹೊಸನಗರ: ಸಮಾಜದಲ್ಲಿ ಮನಸ್ಸುಗಳನ್ನು ಕಟ್ಟಲು ಸಾಧ್ಯವಿರುವ ವ್ಯಕ್ತಿತ್ವಗಳ ಪುತ್ಥಳಿ ನಿರ್ಮಿಸಲಷ್ಟೆ ಸಾಧ್ಯ. ಅಂತಹ ವ್ಯಕ್ತಿತ್ವ ಹೊಂದಿದ ಪುನೀತ್ ರಾಜ್‌ಕುಮಾರ್ ಎಲ್ಲರ ಮನಸ್ಸಿನಲ್ಲಿಯೂ ಇದ್ದಾರೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಳ್ಳಿ-ಕಚ್ಚಿಗೆಬೈಲಿನ ಗ್ರಾಮಸ್ಥರ ಸಹಕಾರದಲ್ಲಿ ಇಲ್ಲಿನ ಪುನೀತ್ ಅಭಿಮಾನಿ ಬಳಗ ಸಂಪಳ್ಳಿ ವೃತ್ತದಲ್ಲಿ ನಿರ್ಮಿಸಿರುವ ಪುನೀತ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಹುಟ್ಟು, ಸಾವು ನಡುವಿನ ಬದುಕು ನಮಗೂ ಮತ್ತು ನಮ್ಮೊಳಗಿನ ಸಮಾಜಕ್ಕೂ ಆನಂದ ನೀಡುವಂತಿರಬೇಕು. ಆ ಆನಂದವಿರಲು ಜೀವನದಲ್ಲಿ ಸಮಾಜಮುಖಿಯಾಗಿ ಬದುಕುವ ಮನಸ್ಸು ಮಾಡಬೇಕು. ಅಂತಹ ಬದುಕನ್ನು ನಡೆಸಿದವರು ಮಾತ್ರ ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಉಳಿಯುವುದಕ್ಕೆ ಸಾಧ್ಯ. ಜೀವನದಲ್ಲಿ ಇಂತಹ ಉತ್ತಮ ಕಾರ್ಯಗಳನ್ನು ತೋರಿಕೆಗಾಗಿ ಮಾಡದೆ ನೈಜವಾಗಿ ಮಾಡಿರುವ ಪುನೀತ್ ಜೀವ ಹೋದಮೇಲೂ ನಮ್ಮೆಲ್ಲರೊಳಗೆ ಜೀವಂತವಾಗಿದ್ದಾರೆ’ ಎಂದರು.

ADVERTISEMENT

ಪುನೀತ್ ಪುತ್ಥಳಿ ನಿರ್ಮಾಣದ ಪ್ರಮುಖ ರೂವಾರಿ ಎಸ್.ಜೆ. ಅವಿನಾಶ್ ಮಾತನಾಡಿ, ‘ಇದೊಂದು ಪ್ರೇರಣೆ ಊರಿನ ಸಂಘಟನೆಗೂ ಕಾರಣವಾಗಿದೆ. ಅಲ್ಲದೆ ಹೊಸನಗರ ತಾಲ್ಲೂಕಿನಲ್ಲಿ ಪುನೀತ್ ಅಭಿಮಾನಿಗಳಾಗಿ ಪ್ರಥಮ ಪುತ್ಥಳಿ ನಿರ್ಮಿಸಿದ ಆತ್ಮತೃಪ್ತಿಯೂ ನಮಗೆ ಲಭಿಸಿದೆ’ ಎಂದು ಹೇಳಿದರು.

ಅಭಿಮಾನಿ ಬಳಗದ ಅಧ್ಯಕ್ಷ ಚಿನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರಶೆಟ್ಟಿ, ಜಿ.ಎಂ. ಪ್ರಕಾಶ್ಗೌಡ, ಸುಮಾ ಸುರೇಶ್, ಮಾಜಿ ಸದಸ್ಯ ಮನೋಧರ, ಎಸ್.ಕೆ. ರಾಜು, ಯೋಗೇಂದ್ರ ಕತ್ರಿಕೊಪ, ನಾರಾಯಣಪ್ಪ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.