ADVERTISEMENT

ಶಿವಮೊಗ್ಗ: ಮಕ್ಕಳ ತಲುಪಲು ವಾಟ್ಸ್ಆ್ಯಪ್ ನೆರವು

ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಿಂದ ಡಿಜಿಟಲ್ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 3:12 IST
Last Updated 8 ಆಗಸ್ಟ್ 2021, 3:12 IST
ವಿಜ್ಞಾನ ಮಾದರಿಯ ಚಟುವಟಿಕೆಯಲ್ಲಿ ತೊಡಗಿರುವ ಶಿವಮೊಗ್ಗದ ಆಯನೂರು ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ವಿದ್ಯಾರ್ಥಿನಿ
ವಿಜ್ಞಾನ ಮಾದರಿಯ ಚಟುವಟಿಕೆಯಲ್ಲಿ ತೊಡಗಿರುವ ಶಿವಮೊಗ್ಗದ ಆಯನೂರು ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ವಿದ್ಯಾರ್ಥಿನಿ   

ಶಿವಮೊಗ್ಗ: ಪ್ರತಿ ವರ್ಷ ಬೇಸಿಗೆಯಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿಜ್ಞಾನ ಶಿಬಿರ ಆಯೋಜಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತಿದ್ದ ಆಯನೂರು ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರ ಈ ಬಾರಿ ಲಾಕ್‌ಡೌನ್ ಕಾರಣ ತುಸು ಭಿನ್ನವಾಗಿಯೇ ಮಕ್ಕಳನ್ನು ತಲುಪುತ್ತಿದೆ.

ಸಮಗ್ರ ಶಿಕ್ಷಣ ಕರ್ನಾಟಕ, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರವು ಏಪ್ರಿಲ್ 7ರಿಂದ ಉಚಿತ ಬೇಸಿಗೆ ಶಿಬಿರ ಆರಂಭಿಸಿದೆ. ಮಕ್ಕಳನ್ನು ತಲುಪಲುಡಿಜಿಟಲ್ ತಂತ್ರಜ್ಞಾನದ ನೆರವು ಪಡೆದಿದೆ.

ಮಕ್ಕಳ ಹಾಗೂ ಪಾಲಕರ ಮೊಬೈಲ್ ಸಂಖ್ಯೆ ಸಂಗ್ರಹಿಸಿ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಅದರ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಹನ ಸಾಧಿಸಲಾಗಿದೆ. ಮಕ್ಕಳು ಮನೆಯಲ್ಲಿಯೇ ಕುಳಿತು ವಿಜ್ಞಾನ, ಗಣಿತ ಮಾದರಿ ತಯಾರಿಕಾ ಹಾಗೂ ಸರಳ ಪೇಪರ್ ಚಟುವಟಿಕೆಯವಿಡಿಯೊಗಳನ್ನು ವಾಟ್ಸ್‌ಆ್ಯಪ್ ಗುಂಪಿಗೆ ಪ್ರತಿದಿನ ಕಳುಹಿಸಲಾಗುತ್ತಿದೆ.

ADVERTISEMENT

ಚಟುವಟಿಕೆ ಹೇಗೆ?: 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಾಟ್ಸ್‌ಆ್ಯಪ್ ಗುಂಪುಗಳನ್ನು ಮಾಡಲಾಗಿದೆ. ಆಯಾ ವಿದ್ಯಾರ್ಥಿಗಳ ಗ್ರೂಪ್‌ಗೆ ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ಮಾರ್ಗದರ್ಶಕರು ಪ್ರತಿದಿನ ಬೆಳಿಗ್ಗೆ ಗಣಿತ, ವಿಜ್ಞಾನ ಮಾದರಿ ತಯಾರಿಕಾ ಹಾಗೂ ಸರಳ ಪೇಪರ್ ಹಾಗೂ ವಿವಿಧ ರೀತಿಯ ಚಟುವಟಿಕೆಯನ್ನು ಮಾಡಿ ವಿಡಿಯೊಗಳನ್ನು ಆಯಾ ತರಗತಿಯ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸುತ್ತಿದ್ದಾರೆ. ಪ್ರತಿ ಚಟುವಟಿಕೆಯನ್ನು ವಿದ್ಯಾರ್ಥಿಗಳು ಮನೆಯಲ್ಲಿಯೇ ದೊರಕುವ ವಸ್ತುಗಳನ್ನು ಬಳಸಿಕೊಂಡು ಮಾಡಿ ಆಯಾ ಗ್ರೂಪ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ಸಂಚಾಲಕ ಅನಿಲ ಹಜೇರಿ.

ಉಚಿತ ಡಿಜಿಟಲ್ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಗೆ ವಿಶೇಷ ವ್ಯಕ್ತಿಗಳಿಂದ ವಿವಿಧ ಪರಿಸರ ಅರಿವು, ಚಿತ್ರಕಲೆ, ಪವಾಡ ರಹಸ್ಯ ಬಯಲು, ವಿಜ್ಞಾನಿಗಳ ಪರಿಚಯ ಹೀಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ದಿನ ನೀಡಲಾದ ವಿಜ್ಞಾನ ಚಟುವಟಿಕೆ ಕುರಿತು ಸಂಜೆ ಸಂಪೂರ್ಣ ಮಾಹಿತಿ ಬರೆದು ಆಯಾ ವಿದ್ಯಾರ್ಥಿಗಳ ಗ್ರೂಪ್‌ಗಳಿಗೆ ಅಗಸ್ತ್ಯ ಮಾರ್ಗದರ್ಶಕ ಹಂಚಿಕೊಳ್ಳುತ್ತಿದ್ದು, ಇದರಿಂದ ತಾವು ಮಾಡಿದ ಚಟುವಟಿಕೆ ಕುರಿತು ವಿಷಯ ಸ್ವ ಅವಲೋಕನ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಮಕ್ಕಳಲ್ಲಿ ವಿಜ್ಞಾನ ವಿಷಯದೆಡೆಗೆ ಆಸಕ್ತಿ, ಪ್ರಶ್ನಾರ್ಥಕ ಮನೋಭಾವ ಹಾಗೂ ಸೃಜನಶೀಲತೆ ಬೆಳೆಸಲಾಗುತ್ತಿದೆ.

10 ವಾಟ್ಸ್‌ಆ್ಯಪ್ ಗುಂಪು: ಜಿಲ್ಲೆಯಲ್ಲಿರುವ ಸರ್ಕಾರಿ, ಅನುದಾನಿತ ಶಾಲೆಗಳಿಂದ2,000 ಮಕ್ಕಳು ಆಯನೂರು ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಲ್ಲಿನೋಂದಣಿ ಮಾಡಿಕೊಂಡಿದ್ದಾರೆ. ಒಂದು ಗುಂಪಿಗೆ 200 ವಿದ್ಯಾರ್ಥಿಗಳಿಗೆ ಒಂದರಂತೆ 10ವಾಟ್ಸ್‌ಆ್ಯಪ್ ಗುಂಪುಗಳನ್ನುರಚಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಹೆಸರು, ಶಾಲೆಯ ಹೆಸರು ಹಾಗೂ ತರಗತಿ ವಿವರಗಳೊಂದಿಗೆ ವಾಟ್ಸ್ಆ್ಯಪ್ ಸಂಖ್ಯೆ: 7795251358 ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅನಿಲ್‌ ತಿಳಿಸಿದರು.

ಮೊದಲ ಅಲೆಯಲ್ಲಿ ಸ್ವಯಂ ಸೇವಕರ ಬಳಕೆ
‘ಮೊದಲ ಬಾರಿ ಲಾಕ್‌ಡೌನ್‌ ಆದಾಗ ಹಳ್ಳಿಗಳಲ್ಲಿ ಇರುವ ಸ್ವಯಂ ಸೇವಕರನ್ನು ಬಳಕೆ ಮಾಡಿಕೊಂಡು ಮಕ್ಕಳನ್ನು ಒಂದೆಡೆ ಕೂರಿಸಿ ಮಕ್ಕಳಿಗೆ ವಿಜ್ಞಾನ, ಗಣಿತ ಮಾದರಿ ಚಟುವಟಿಕೆಯನ್ನು ಹೇಳಿಕೊಡಲಾಗುತ್ತಿತ್ತು. 2ನೇ ಅಲೆ ಮಾರ್ಗಸೂಚಿ ಅನ್ವಯ ಮಕ್ಕಳಿಗೆ ನೇರವಾಗಿ ಪಾಠ ಭೋಧನೆ ಮಾಡಲು ಸಾಧ್ಯವಾಗದ ಕಾರಣ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಅದರ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ಸಂಚಾಲಕ ಅನಿಲ ಹಜೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.