
ಶಿವಮೊಗ್ಗ:ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅ. 2ರಿಂದ 7ರವರೆಗೆ 64ನೇ ವನ್ಯಜೀವಿ ಸಪ್ತಾಹ ಹಮ್ಮಿಕೊಂಡಿದೆ.
ಅ. 2ರಂದು ಕುವೆಂಪು ರಂಗಮಂದಿರದಲ್ಲಿ ಸಪ್ತಾಹದ ಉದ್ಘಾಟಿಸಲಾಗುವುದು. ಸಪ್ತಾಹದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದೇ ವೇಳೆ ಕಾಲ್ನಡಿಗೆ ಹಾಗೂ ಸೈಕಲ್ ಜಾಥಾಗೆ ಚಾಲನೆ ನೀಡಲಾಗುವುದು. 2ರಂದು ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು, 3ರಂದು ಆಶುಭಾಷಣ ಸ್ಪರ್ಧೆ, 4ರಂದು ಪ್ರಬಂಧ ಸ್ಪರ್ಧೆ, 5ರಂದು ಭಾಷಣ ಸ್ಪರ್ಧೆ, 6ರಂದು ಛಾಯಾಚಿತ್ರ ಪ್ರದರ್ಶನ ಹಾಗೂ 7ರಂದು ಕ್ವಿಜ್ ಸ್ಪರ್ಧೆಗಳು ಇರುತ್ತವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಪ್ತಾಹದ ಅಂಗವಾಗಿ ನಡೆಯುವ ಜಿಲ್ಲಾಮಟ್ಟದ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು. ಸೆಮಿಫೈನಲ್ಸ್ ಹಂತ ತಲುಪಿದಂತಹ ಪ್ರೌಢ ಶಾಲೆ ವಿಭಾಗದ 32 ಹಾಗೂ ಕಾಲೇಜು ವಿಭಾಗದ 32 ತಂಡಗಳಿಗೆ ಶರಾವತಿ ಹಿನ್ನೀರಿನ ಮುಪ್ಪಾನೆ ಫಾರೆಸ್ಟ್ ಕ್ಯಾಂಪ್ನಲ್ಲಿ ಎರಡು ದಿನ ಉಚಿತ ಪ್ರಕೃತಿ ಶಿಬಿರದಲ್ಲಿ ಭಗಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ವಿವರ ನೀಡಿದರು.
13ರಂದು ಆನೆಗಳ ಉತ್ಸವ
ಅ. 13ರಂದು ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಉತ್ಸವ ಹಮ್ಮಿಕೊಳ್ಳಲಾಗಿದೆ. 4 ಮರಿಯಾನೆ ಹೊರತುಪಡಿಸಿ, 18 ಆನೆಗಳು ಉತ್ಸಾಹದಲ್ಲಿ ಭಾಗವಹಿಸುತ್ತವೆ. ಈಗಾಗಲೇ ವಿವಿಧ ಆಟೋಟಗಳಲ್ಲಿ ಅವುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವನ್ಯಜೀವಿ ವೈದ್ಯ ಡಾ.ವಿನಯ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್, ಎಚ್.ಎಲ. ಹಾಲಪ್ಪ, ಪುಟ್ನಳ್ಳಿ ಉಪಸ್ಥಿತರಿದ್ದರು.
ಸಾಗರ ಅಂಬಾರಿ ಹೊರಲಿದ್ದಾನೆ
ಶಿವಮೊಗ್ಗ ದಸರಾದಲ್ಲಿ ಈ ಬಾರಿಯೂ ಸಕ್ರೆಬೈಲಿನ ಆನೆ ಸಾಗರ ಅಂಬಾರಿ ಹೊರಲಿದ್ದಾನೆ. ಅವನಿಗೆ ಗೀತಾ ಮತ್ತು ಗಂಗೆ ಸಾಥ್ ನೀಡಲಿದ್ದಾರೆ.
ಈಗಾಗಲೇ ತಾಲೀಮು ಆರಂಭಿಸಿದ್ದು, ಅಂಬಾರಿಯಷ್ಟು ಭಾರ ಹೊರಿಸಿ, ಹಲವು ಕಿ.ಮೀ. ನಡೆಸಲಾಗುತ್ತಿದೆ. ಅ. 18ರಂದು ನಗರಕ್ಕೆ ಕರೆತರಲಾಗುವುದು ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.