
ಶಿವಮೊಗ್ಗ: ಕಾಡಂಚಿನ ಅಡಿಕೆ ತೋಟಗಳು, ಮೆಕ್ಕೆಜೋಳದ ಹೊಲಗಳ ಬಳಿ ಆಹಾರ ಅರಸಿ ಬರುವ ಕಾಡು ಹಂದಿ, ಜಿಂಕೆಗಳ ಬೇಟೆಗೆಂದು ಕಳ್ಳ ಬೇಟೆಗಾರರು ಉರುಳು ಹಾಕುತ್ತಿದ್ದಾರೆ. ಅದು ಶಿವಮೊಗ್ಗ ವನ್ಯಜೀವಿ ವೃತ್ತದಲ್ಲಿ ಕರಡಿಗಳಿಗೆ ಕಂಟಕವಾಗಿದೆ. ಜಾಂಬವನ ಸಹಜ ಓಡಾಟಕ್ಕೆ ಅಡ್ಡಿಯಾಗಿದೆ.
ಕಳೆದ ಆರು ತಿಂಗಳಲ್ಲಿ ಭದ್ರಾವತಿ ವನ್ಯಜೀವಿ ವಿಭಾಗದ ಭದ್ರಾವತಿ, ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ ವಲಯದ ಶಾಂತಿಸಾಗರ, ಜೋಳದಾಳು ವಲಯದ ಮಾವಿನಕಟ್ಟೆ, ಮಾದೇನಹಳ್ಳಿ, ಶಿವಮೊಗ್ಗ ವನ್ಯಜೀವಿ ವಿಭಾಗದ ಕುಂಚೇನಹಳ್ಳಿ ಸೇರಿ ಎಂಟು ಕಡೆ ಕರಡಿಗಳು ಉರುಳಿಗೆ ಸಿಲುಕಿವೆ.
ಜೀವಕ್ಕೆ ಕುತ್ತು:
ಉರುಳಿಗೆ ಕರಡಿಗಳ ಕತ್ತು, ಸೊಂಟ ಇಲ್ಲವೇ ಕಾಲು ಸಿಲುಕುತ್ತಿವೆ. ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿ ಅವುಗಳನ್ನು ಬಂಧ ಮುಕ್ತಗೊಳಿಸಿದರೂ ಉರುಳು ಬಿದ್ದ ಜಾಗದಲ್ಲಿ ಹಲವು ಗಂಟೆಗಳು ರಕ್ತ ಸಂಚಾರವಿಲ್ಲದೇ ಕ್ರಮೇಣ ಆ ಭಾಗ ಕೊಳೆಯುತ್ತದೆ. ಅದು ಗ್ಯಾಂಗ್ರಿನ್‌ಗೆ ತಿರುಗಿ ಕರಡಿಗಳ ಜೀವಕ್ಕೆ ಕುತ್ತು ತರುತ್ತಿದೆ.
ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ಬಳಿ ಉರುಳಿಗೆ ಸಿಲುಕಿದ್ದ ಕರಡಿಯನ್ನು ರಕ್ಷಿಸಿ ತಂದಾಗ ಅದರ ಕಾಲು ಕೊಳೆತು ಸೋಂಕು ದೇಹಕ್ಕೂ ಹರಡಿ ಸಾವನ್ನಪ್ಪಿದೆ. ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದ ಬಳಿ ರಕ್ಷಿಸಿ ತಂದಿದ್ದ ಕರಡಿಯ ಕಾಲು ಕೊಳೆತಿದೆ.
ಕೆಲವೊಮ್ಮೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಹೋಗುವ ಮುನ್ನವೇ ಜಮೀನಿನ ಮಾಲೀಕರು ಜೆಸಿಬಿ ಯಂತ್ರ ತರಿಸಿ ಉರುಳು ಬಿಡಿಸಿ ಕಾಡಿಗೆ ಓಡಿಸುತ್ತಾರೆ. ಆಗ ಉರುಳಿನ ಒಂದಷ್ಟು ಭಾಗ ಕರಡಿಯ ದೇಹದಲ್ಲಿಯೇ ಉಳಿಯುತ್ತದೆ. ಅದು ಕರಡಿ ಜೀವಕ್ಕೆ ಕುತ್ತು ತರುವುದಲ್ಲದೇ ಅದರ ದೈನಂದಿನ ಸಹಜ ಬದುಕಿಗೂ ಧಕ್ಕೆ ತರುತ್ತದೆ ಎಂದು ವನ್ಯಜಿವಿ ತಜ್ಞರೊಬ್ಬರು ಹೇಳುತ್ತಾರೆ.
ಉರುಳಿಗೆ ಕಾಡು ಹಂದಿ, ಜಿಂಕೆ ಸಿಲುಕಿದರೆ ಸದ್ದಿಲ್ಲದೇ ಬೇಟೆಗಾರರ ಪಾಲಾಗುತ್ತವೆ. ಆದರೆ ಕರಡಿಗಳು ಬಿದ್ದರೆ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿಯೇ ಬರಬೇಕಿದೆ.
ಅರಣ್ಯ ಇಲಾಖೆಗೂ ಆಸಕ್ತಿ ಇಲ್ಲ?
‘ಜಿಂಕೆ ಮಾತ್ರವಲ್ಲ; ಕಾಡು ಹಂದಿ ಬೇಟೆಯೂ ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಅನ್ವಯ ಶಿಕ್ಷಾರ್ಹ ಅಪರಾಧ. ಉರುಳು ಇಟ್ಟ ತೋಟ, ಹೊಲಗಳ ಮಾಲೀಕರೇ ಅದಕ್ಕೆ ಜವಾಬ್ದಾರರು. ಆದರೆ, ಅದಕ್ಕೂ ನಮಗೂ ಸಂಬಂಧವೇ ಇಲ್ಲ. ಯಾರೋ ಇಟ್ಟು ಹೋದರೆ ನಾವೇಕೆ ಹೊಣೆ ಆಗಬೇಕು?’ ಎಂಬುದು ಜಮೀನಿನ ಮಾಲೀಕರ ಪ್ರಶ್ನೆ.
ಜೊತೆಗೆ ರಾಜಕೀಯ ಒತ್ತಡವು ಅರಣ್ಯ ಇಲಾಖೆ ಅಧಿಕಾರಿಗಳ ಕೈಕಟ್ಟಿಹಾಕಿದೆ. ಹೀಗಾಗಿ ಉರುಳಿನಿಂದ ಕರಡಿಗಳನ್ನು ರಕ್ಷಿಸುವಲ್ಲಿ, ಅಂತಹ ಘಟನೆಗಳು ಪುನರಾವರ್ತನೆ ಆಗದಂತೆ ತಡೆಯುವಲ್ಲಿ ಯಾರಿಗೂ ಆಸಕ್ತಿಯೇ ಇಲ್ಲ. ಕಳ್ಳ ಬೇಟೆಗಾರರ ವಿರುದ್ಧ ಗಂಭೀರ ಕ್ರಮಕ್ಕೂ ಇಲಾಖೆ ಮುಂದಾಗುತ್ತಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.
ಚಿರತೆಗಳೂ ಬಿದ್ದಿವೆ!
ಮಾದೇನಹಳ್ಳಿ ಬಳಿ ಜೋಳದ ಹೊಲದಲ್ಲಿ ಹಾಗೂ ಸೊರಬ ತಾಲ್ಲೂಕಿನ ಆನವಟ್ಟಿ ಬಳಿ ಹಾಕಿದ್ದ ಉರುಳಿಗೆ ವಾರದ ಹಿಂದೆ ಎರಡು ಚಿರತೆಗಳೂ ಬಿದ್ದಿವೆ. ಮಾದೇನಹಳ್ಳಿಯಲ್ಲಿ ತಾಯಿ ಚಿರತೆಯೊಂದಿಗೆ ಅಲ್ಲಿಗೆ ಬಂದಿದ್ದ ಮರಿ ಚಿರತೆಯನ್ನು ರಕ್ಷಿಸಿ ಮತ್ತೆ ಅರಣ್ಯಕ್ಕೆ ಬಿಡಲಾಯಿತು.
ತಿಂಗಳಲ್ಲಿ ನಾಲ್ಕು ದಿನ ಪರಿಶೀಲನೆ; ಡಿಸಿಎಫ್
‘ಕಾಡು ಹಂದಿಗೆ ಅಥವಾ ಮತ್ತ್ಯಾವುದಕ್ಕೋ ಹಾಕಿದ ಉರುಳಿಗೆ ವಿವಿಧ ರೀತಿಯ ಪ್ರಾಣಿಗಳು ಬೀಳುತ್ತಿವೆ. ಹೀಗಾಗಿ ಅರಣ್ಯದ ಗಡಿ ಭಾಗದಲ್ಲಿ ತಿಂಗಳಲ್ಲಿ ನಾಲ್ಕು ದಿನ ತಪಾಸಣಾ ಕಾರ್ಯ ನಡೆಸುತ್ತಿದ್ದೇವೆ’ ಎಂದು ಭದ್ರಾವತಿ ವನ್ಯಜೀವಿ ವಿಭಾಗದ ಡಿಸಿಎಫ್ ಎಂ. ರವೀಂದ್ರಕುಮಾರ್ ಹೇಳುತ್ತಾರೆ. ‘ಜಮೀನಿನಲ್ಲಿ ಯಾರೂ ಉರುಳು ಕಟ್ಟಿ ಹೋಗಿ ಬಿಟ್ಟಿರುತ್ತಾರೆ. ಅಲ್ಲಿ ರೈತರು ವಾಸವಿರುವುದಿಲ್ಲ. ಆದರೂ ಕರಡಿಗಳು ಸಿಲುಕಿಕೊಂಡ ಜಮೀನಿನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಪ್ರಾಣಿಗಳ ಕಳ್ಳಬೇಟೆ ತಡೆಗೆ ಕಾನೂನಿನ ಅರಿವು ಮೂಡಿಸಲು ಅರಣ್ಯದಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.