ADVERTISEMENT

ಶಿವಮೊಗ್ಗ ಪಾಲಿಕೆ ಚುನಾವಣೆ ನಡೆಸದಿದ್ದರೆ ಕೋರ್ಟ್‌ಗೆ ಮೊರೆ: ಕೆ.ಎಸ್. ಈಶ್ವರಪ್ಪ

ರಾಜ್ಯ ಸರ್ಕಾರಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 4:38 IST
Last Updated 17 ಜನವರಿ 2026, 4:38 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಎರಡು ವರ್ಷ ಕಳೆದಿದೆ. ರಾಜ್ಯ ಸರ್ಕಾರ ಕೂಡಲೇ ಪಾಲಿಕೆಗೆ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ರಾಷ್ಟ್ರಭಕ್ತ ಬಳಗದಿಂದ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ರಾಜ್ಯ ಚುನಾವಣೆ ಆಯೋಗದ ಮುಖ್ಯ ಆಯುಕ್ತ ಜಿ.ಎಸ್.ಸಂಗ್ರೇಶಿ ಶಿವಮೊಗ್ಗಕ್ಕೆ ಬಂದಿದ್ದರು. ಆಗ ಅವರನ್ನು ಭೇಟಿ ಮಾಡಿದ್ದ ರಾಷ್ಟ್ರಭಕ್ತರ ಬಳಗದ ನಿಯೋಗ ಮಹಾನಗರ ಪಾಲಿಕೆಗೆ ಶೀಘ್ರವೇ ಚುನಾವಣೆ ನಡೆಸುವಂತೆ ಮನವಿ ನೀಡಿತ್ತು.

ಮನವಿ ಸ್ವೀಕರಿಸಿದ್ದ ಅವರು, ಶಿವಮೊಗ್ಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡಿದೆ. ಸರ್ಕಾರದ ವತಿಯಿಂದ ವಾರ್ಡ್ ಮೀಸಲಾತಿಯ ಪರಿಷ್ಕೃತ ಪಟ್ಟಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ಇದೂವರೆಗೆ ರಾಜ್ಯ ಸರ್ಕಾರ ಮೀಸಲಾತಿಯ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ADVERTISEMENT

ಅವಧಿ ಮುಗಿದ ಪಾಲಿಕೆಗಳ ಪರಿಷ್ಕೃತ ಕ್ಷೇತ್ರ ಹಾಗೂ ವಾರ್ಡ್ ಮೀಸಲಾತಿ ಅಧಿಸೂಚನೆ ಸರ್ಕಾರ ನಿಗದಿತ ಕಾಲಮಿತಿಯಲ್ಲಿ ಹೊರಡಿಸದೇ ಇದ್ದರೆ ಸುಪ್ರೀಂ ಕೋರ್ಟ್ ಆದೇಶದಂತೆ ಹಿಂದಿನ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸಂಗ್ರೇಶಿ ತಿಳಿಸಿದ್ದರು.

ಆದರೆ ಇದುವರೆಗೂ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿಲ್ಲ. ಅಲ್ಲದೆ ರಾಜ್ಯ ಚುನಾವಣಾ ಆಯೋಗವು ಕೂಡ ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಶೀಘ್ರ ಪಾಲಿಕೆಯ ಪರಿಷ್ಕೃತ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಕಾಲ ಮಿತಿಯೊಳಗೆ ಬಿಡುಗಡೆ ಮಾಡದಿದ್ದಲ್ಲಿ ಚುನಾವಣಾ ಆಯೋಗವು ನ್ಯಾಯಾಲಯದ ನಿರ್ದೇಶನದಂತೆ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆಗಳಿಗೆ ₹200 ಕೋಟಿ ಬಿಡುಗಡೆ ಮಾಡುತ್ತೇನೆ ಸಚಿವ ಭೈರತಿ ಸುರೇಶ್ ಹೇಳಿದ್ದರು. ಇದುವರೆಗೂ ನಯಾ ಪೈಸೆ ಕೊಟ್ಟಿಲ್ಲ. ಗೋವಿಂದಾಪುರದ ಆಶ್ರಯ ಬಡಾವಣೆಯಲ್ಲಿ ಮೂಲ ಸೌಲಭ್ಯಕ್ಕೆ ₹12 ಕೋಟಿ ಕೊಡುವುದಾಗಿ ಹೇಳಿದ್ದ ಸಚಿವ ಜಮೀರ್ ಅಹಮದ್‌ ಖಾನ್‌ ಮತ್ತೆ ಈ ಕಡೆ ತಲೆಹಾಕಿಲ್ಲ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಕೆ.ಈ.ಕಾಂತೇಶ್, ಈ.ವಿಶ್ವಾಸ್, ಮೋಹನ್ ಜಾಧವ್, ಕುಬೇರಪ್ಪ, ಗೋವಿಂದ, ಶಂಕರ ನಾಯ್ಕ್, ಲೋಕೇಶ್ ಮತ್ತಿತರಿದ್ದರು.

ಲೋಕಾಯುಕ್ತರು ಚಹಾ ಕುಡಿದದ್ದೇ ಬಂತು..

‘ಜನಪ್ರತಿನಿಧಿಗಳಿಲ್ಲದೇ ಶಿವಮೊಗ್ಗ ನಗರದಲ್ಲಿ ಆಡಳಿತ ಶೂನ್ಯವಾಗಿದೆ. ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಶಿವಮೊಗ್ಗದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ನಂಬದ ಪರಿಸ್ಥಿಯಲ್ಲಿ ಜನರು ಇದ್ದಾರೆ. ಏಕೆಂದರೆ ಲೋಕಾಯುಕ್ತ ಪೊಲೀಸರು ಹಲವಾರು ಬಾರಿ ಪರಿಶೀಲನೆ ನೆಪದಲ್ಲಿ ಮಹಾನಗರ ಪಾಲಿಕೆಗೆ ಬಂದು ಚಹಾ ಕುಡಿದು ಹೋಗಿದ್ದು ಬಿಟ್ಟರೆ ಅಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಕೆ.ಎಸ್‌.ಈಶ್ವರಪ್ಪ ದೂರಿದರು.