ADVERTISEMENT

Womens Day: ಸಂಗೀತ ಸೇವಕಿ ವಿಜಯಲಕ್ಷ್ಮಿ..

ಎಚ್.ಎಸ್.ರಘು
Published 8 ಮಾರ್ಚ್ 2024, 7:32 IST
Last Updated 8 ಮಾರ್ಚ್ 2024, 7:32 IST
ವಿಜಯಲಕ್ಷ್ಮಿ ನಾಡಿಗ್
ವಿಜಯಲಕ್ಷ್ಮಿ ನಾಡಿಗ್   

ಶಿಕಾರಿಪುರ: ಯಾವುದೇ ಅಪೇಕ್ಷೆ ಇಲ್ಲದೇ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಟ್ಟಣದ ನಿವಾಸಿ ಹಾಗೂ ಕಲ್ಯಾಣಿ ಭಜನಾ ಮಂಡಳಿ ಸಂಸ್ಥಾಪಕಿ ವಿಜಯಲಕ್ಷ್ಮಿ ನಾಡಿಗ್ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವಿಜಯಲಕ್ಷ್ಮಿ ನಾಡಿಗ್ ಚಿರಪರಿಚಿತರು. ಇವರು ಪ್ರತಿ ಶನಿವಾರ ಹಾಗೂ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳಲ್ಲಿ ತಮ್ಮ ತಂಡದ ಸದಸ್ಯರೊಂದಿಗೆ ಭಜನೆ ಹಾಗೂ ಭಕ್ತಿಗೀತೆಗಳನ್ನು ಹಾಡುವ ಮೂಲಕ ಪಟ್ಟಣದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರತಿದಿನ ದೇವಸ್ಥಾನದಲ್ಲಿ ಸುಪ್ರಭಾತ ಸೇವೆ ನೀಡುತ್ತಿದ್ದಾರೆ.

ಭಜನಾ ಮಂಡಳಿ ಆರಂಭಿಸಿರುವ ಇವರು ವೀಣಾ ವಾದನ, ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಸ್ತೋತ್ರಗಳನ್ನು ಶಿಷ್ಯರಿಗೆ ಕಲಿಸುತ್ತಿದ್ದಾರೆ. ರಾಜ್ಯ ಹಾಗೂ ವಿದೇಶಗಳಲ್ಲಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿನ ಭಜನಾ ಮಂಡಳಿಯವರಿಗೆ ಭಜನೆಗಳನ್ನು ಕಲಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದಕ್ಕೆ ಯಾವುದೇ ಸಂಭಾವನೆ ಪಡೆಯದೆ ಕಲಾ ಸೇವೆ ಮಾಡುತ್ತಿದ್ದಾರೆ. ಆಂಜನೇಯ ದೇವರ ಕುರಿತು 1,008 ಹಾಡುಗಳನ್ನು ಸಂಗ್ರಹಿಸಿದ್ದು, ಅದನ್ನು ಪುಸ್ತಕ ರೂಪದಲ್ಲಿ ಹೊರತರಲು ಸಿದ್ಧತೆ ನಡೆಸಿದ್ದಾರೆ. 

ADVERTISEMENT

ಮಂತ್ರಾಲಯದಲ್ಲಿ ನಡೆದ ಗಿನ್ನಿಸ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಸತತ 10 ಗಂಟೆಗಳ ಕಾಲ ಭಜನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಮಲೇಷ್ಯಾದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿಯೂ ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು. ನಿಸ್ವಾರ್ಥ ಸೇವೆಯ ಕಾರಣ ಹಲವು ಸಂಘ–ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಜೀವಮಾನ ಸಾಧನೆ ಪ್ರಶಸ್ತಿಯೂ ಇವರಿಗೆ ಲಭಿಸಿದೆ.

‘ಸಂಗೀತ ಕಲೆ ಆರೋಗ್ಯಕ್ಕೆ ಪೂರಕವಾದುದು. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ನಾನು ಕಲಿತ ವಿದ್ಯೆಯನ್ನು ಇತರರಿಗೂ ಹಂಚುವ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನಗೆ ತೃಪ್ತಿ ಹಾಗೂ ಸಂತೋಷ ಸಿಗುತ್ತದೆ’ ಎಂದು ವಿಜಯಲಕ್ಷ್ಮಿ ನಾಡಿಗ್ ಹೇಳುತ್ತಾರೆ.

ಶಿಕಾರಿಪುರದ ವಿಜಯಲಕ್ಷ್ಮಿ ನಾಡಿಗ್ ಅವರನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.